ನ್ಯೂಸ್ ನಾಟೌಟ್: ಇದು ರಸ್ತೆಯೋ ಅಥವಾ ಈಜು ಕೊಳವೋ, ಈ ರಸ್ತೆಯ ಮೇಲೆ ಚಲಿಸುವ ಎಲ್ಲ ವಾಹನಗಳು ಯಾವುದೋ ಒಂದು ಪ್ರವಾಹವನ್ನು ಈಜಿ ದಾಟುತ್ತಿರುವಂತೆ ಭಾಸವಾಗುತ್ತದೆ. ಜನ ನಡೆದಾಡುವುದಕ್ಕೂ ಪರದಾಟ ನಡೆಸುತ್ತಿದ್ದು ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ದಿನನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.
ಇದು ಸುಳ್ಯ ನಗರದ ರಸ್ತೆಯೊಂದರ ಪ್ಯಾಥೆಟಿಕ್ ಕಥೆ.. ಜಟ್ಟಿಪಳ್ಳ-ಕೊಡಿಯಾಲ ಬೈಲ್ ಸುಳ್ಯ ಸಂಪರ್ಕಿಸುವ ರಸ್ತೆಯಾಗಿದ್ದು ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಗೆ ಸಣ್ಣ ಪ್ರವಾಹವೇ ಉಂಟಾಗಿದೆ. ಯಾವುದು ರಸ್ತೆ, ಯಾವುದು ಗುಂಡಿ ಅನ್ನುವುದೇ ಇಲ್ಲಿ ಗೊತ್ತಾಗುತ್ತಿಲ್ಲ. ಹಾಗೆ ಬಂದ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಇಲ್ಲಿ ಪಲ್ಟಿಯಾಗುತ್ತಿದ್ದಾರೆ. ಬಿದ್ದಲ್ಲಿಂದಲೇ ರಾಜಕಾರಣಿಗಳಿಗೆ ಶಾಪ ಹಾಕಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ಕೊಡಿಯಾಲ ಬೈಲ್ ಪದವಿ ಕಾಲೇಜಿಗೆ ತೆರಳುವ ನೂರಾರು ಮಕ್ಕಳು ನಿತ್ಯ ಸಂಕಟಪಡುವಂತಾಗಿದೆ. ಅದೆಷ್ಟೋ ಸಲ ಮಕ್ಕಳಿಗೆ ರಸ್ತೆಯ ಕೆಸರು ರಟ್ಟಿ ಬಟ್ಟೆ ಹಾಳಾಗಿ ಅವರು ಮನೆಗೆ ತೆರಳಿರುವ ಘಟನೆಯೂ ನಡೆದಿದೆ. ಹಲವಾರು ವರ್ಷಗಳಿಂದ ಕೇವಲ ಭರವಸೆ ನೀಡಲಾಗುತ್ತಿದೆಯಾದರೂ ಕ್ಷೇತ್ರದ ಶಾಸಕ ಕಮ್ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಅವರಾಗಲಿ ಅಥವಾ ನಗರ ಪಂಚಾಯತ್ ನವರಾಗಲಿ ಇದುವರೆಗೆ ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮಾತ್ರವಲ್ಲ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಅನ್ನುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.