ನ್ಯೂಸ್ ನಾಟೌಟ್: ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನ ನಿಗೂಢ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಸಹಜ ಸಾವೆಂದು ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಮುಂದಾಗಿರುವ ಘಟನೆ ನಡೆದಿದೆ.
ಅಕ್ಟೋಬರ್ 10 ರಂದು ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೇ ಅದೊಂದು ಸಿಸಿಟಿವಿ ವೀಡಿಯೋ, ಸಾವಿಗೆ ಟ್ವಿಸ್ಟ್ ಕೊಟ್ಟಿದೆ. ಇದರ ರಹಸ್ಯ ಮಗಳು ಹೊರಗೆ ತರುವ ಕೆಲಸ ಮಾಡಿದ್ದಾರೆ.
ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ 47 ವರ್ಷದ ಸಂತೋಷ ಪದ್ಮಣ್ಣವರ್ ಅಕ್ಟೋಬರ್ 9 ರಂದು ಮನೆಯಲ್ಲಿ ಬೆಳಗಿನ ಜಾವ ಮೃತಪಟ್ಟಿದ್ದರು. ಇದೊಂದು ಸಹಜ ಸಾವು ಎಂದು ಅಕ್ಟೋಬರ್ 10 ರಂದು ಎಲ್ಲರೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದರು.
ಆದರೇ ಎರಡು ದಿನಗಳ ಹಿಂದೆ ಮೃತ ಸಂತೋಷ್ ಮಗಳು ಸಂಜನಾ ಮನೆಯಲ್ಲಿ ಕುಳಿತ ಸಂದರ್ಭದಲ್ಲಿ ಮನೆಗೆ ಯಾರೆಲ್ಲ ಬಂದಿದ್ದರು ಎಂದು ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿದ್ದಾಳೆ. ಈ ವೇಳೆ ತಾಯಿ ಮಗಳನ್ನು ಗದರಿಸಿದ್ದು, ಸ್ನಾನಕ್ಕೆ ಹೋಗುವಂತೆ ಹೇಳಿದ್ದಾರೆ. ಸ್ನಾನ ಮಾಡಿ ವಾಪಸ್ ಬರುವಷ್ಟರಲ್ಲಿಯೇ ತಾಯಿ ಉಮಾ ಸಿಸಿಟಿವಿ ದೃಶ್ಯವನ್ನು ಡಿಲೀಟ್ ಮಾಡಿದ್ದಳು. ಇದು ಮಗಳಿಗೆ ಅನುಮಾನ ಮೂಡಿಸಿದೆ.
ಸಂಜನಾ ದೂರು ಹಿನ್ನೆಲೆಯಲ್ಲಿ ಸಂತೋಷ ಪದ್ಮಣ್ಣವರ್ ಮೃತದೇಹವನ್ನು ಹೊರ ತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ದಾರೆ. ಮೃರಣೊತ್ತರ ಪರೀಕ್ಷೆ ವರದಿ ಬಂದ ಬಳಿಕ ಸಹಜ ಸಾವೋ, ಕೊಲೆಯೋ ಎಂಬುದು ಖಚಿತವಾಗಿ ಗೊತ್ತಾಗಲಿದೆ. ಇನ್ನು ಪದ್ಮಣ್ಣವರ್ ಮನೆಗೆ ಅಪರಿಚತರು ಬಂದು ಹೋಗಿರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಮತ್ತೆ ತನಿಖೆ ನಡೆಯುತ್ತಿದೆ.