ನ್ಯೂಸ್ ನಾಟೌಟ್: ನವರಾತ್ರಿ ಉತ್ಸವದಲ್ಲಿ ದಾಖಲೆ ಪ್ರಮಾಣದಲ್ಲಿ 16,200 ಕೆ.ಜಿ ದೀಪದ ಎಣ್ಣೆ ಸಂಗ್ರಹವಾಗಿ, ಲಕ್ಷಾಂತರ ರೂ. ಆದಾಯ ಬಂದಿದೆ. ಇನ್ನು ಇಲ್ಲಿಂದ ಸಾರಿಗೆ ಸಂಸ್ಥೆಗೂ ಬರೋಬ್ಬರಿ 66 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
“ನವರಾತ್ರಿಯಲ್ಲಿ ಎಣ್ಣೆ ಹೊಂಡದಲ್ಲಿ ಸ್ನಾನ ಮಾಡುವ ಭಕ್ತರು ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು ಪ್ರತಿಷ್ಠಾಪಿಸಿದ ಅಖಂಡ ಜ್ಯೋತಿಗೆ ಎಣ್ಣೆ ಸಮರ್ಪಿಸುವುದು ಸಂಪ್ರದಾಯ. ಗುಡ್ಡಕ್ಕೆ ಬರುವ ಪ್ರತಿ ಭಕ್ತರು ಅದಕ್ಕೆ ಎಣ್ಣೆ ಹಾಕಿ, ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಣ್ಣೆ ದರ ಹೆಚ್ಚಿದ್ದರಿಂದ ಎಣ್ಣೆ ಸಂಗ್ರಹ ಪ್ರಮಾಣ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, 2 ಸಾವಿರ ಕೆಜಿ ಹೆಚ್ಚು ಎಣ್ಣೆ ಸಂಗ್ರಹವಾಗಿದೆ” ಎಂದು ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
“ಕಳೆದ ವರ್ಷ ನವರಾತ್ರಿಯಲ್ಲಿ 14,194 ಕೆಜಿ ಎಣ್ಣೆ ಸಂಗ್ರಹವಾಗಿತ್ತು. ಪ್ರತಿ ಕೆಜಿಗೆ 51 ರೂ. ದರದಲ್ಲಿ ಮಾರಾಟ ಮಾಡಿದಾಗ 7,23,894 ರೂ. ಆದಾಯ ದೇವಸ್ಥಾನಕ್ಕೆ ಬಂದಿತ್ತು. ಈ ಬಾರಿ ಅ. 3ರಿಂದ ಅ.13ರ ವರೆಗೆ 16,200 ಕೆ.ಜಿ. ಎಣ್ಣೆ ಸಂಗ್ರಹಗೊಂಡಿದೆ. ಇದನ್ನು ಟೆಂಡರ್ ಪಡೆದಿರುವವರಿಗೆ ಪ್ರತಿ ಕೆಜಿಗೆ 58 ರೂ. ದರದಲ್ಲಿ ಮಾರಾಟ ಮಾಡಿದರೆ 9,39,600 ಆದಾಯ ಬರಲಿದೆ. ಈ ನವರಾತ್ರಿ ಸಂದರ್ಭದಲ್ಲಿ ಒಟ್ಟು 21 ಲಕ್ಷ ಭಕ್ತರು ದೇವಿ ದರ್ಶನ ಪಡೆದಿರುವುದು ಮತ್ತೊಂದು ದಾಖಲೆ” ಎಂದರು.
Click