ನ್ಯೂಸ್ ನಾಟೌಟ್: ಒಂದು ಕಡೆ ಧೋ…ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಮೈ ಕೊರೆಯುವ ಚಳಿ. ಈ ನಡುವೆ ಸ್ವಲ್ಪ ಸಿಹಿ ತಿಂದರೆ ಹೇಗಿರುತ್ತೆ ಎಂದು ಕೊಡಗಿನ ಕುಶಾಲನಗರದ ಸ್ವೀಟ್ ಅಂಗಡಿಗೆ ಹೋದ ಮಹಿಳಾ ಗ್ರಾಹಕರೊಬ್ಬರು ಸ್ವೀಟ್ ಖರೀದಿಸಿ ಬಾಯಿಗೆ ಇಡಬೇಕು ಅನ್ನುವಷ್ಟರಲ್ಲಿ ಸ್ವೀಟ್ ನಲ್ಲಿ ಮಿರಿ..ಮಿರಿ ಹುಳಗಳು ನೃತ್ಯ ಮಾಡಿದ ದೃಶ್ಯ..ಇದರಿಂದ ರೊಚ್ಚಿಗೆದ್ದ ಗ್ರಾಹಕಿ ದೂರು ನೀಡಿದರು. ದೂರಿನನ್ವಯ ಪಟ್ಟಣ ಪಂಚಾಯತ್ ನವರು ಬಂದು ಅಂಗಡಿಗೆ ಬೀಗ ಹಾಕಿದ ಘಟನೆ ಗುರುವಾರ ನಡೆದಿದೆ.
ಏನಿದು ಘಟನೆ?
ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ ಲೇಖಕಿ ಶರ್ಮಿಳಾ ರಮೇಶ್ ಕುಶಾಲನಗರದ ಸ್ವೀಟ್ಸ್ ಅಂಗಡಿಯಿಂದ ಮೈಸೂರು ಪಾಕ್ ಹಾಗೂ ಲಾಡು ಖರೀದಿಸಿದ್ದರು. ಮನೆಗೆ ಬಂದು ಸಿಹಿತಿಂಡಿಯ ಪೊಟ್ಟಣ ತೆರೆದು ನೋಡಿದಾಗ ಅದರಲ್ಲಿ ಹುಳುಗಳು ಕಂಡು ಬಂದಿದೆ. ಬೆಲೆ ಹೆಚ್ಚಾದರೂ ಪರವಾಗಿಲ್ಲ ಹೆಸರಾಂತ ಅಂಗಡಿಯಿಂದ ತೆಗೆದುಕೊಂಡು ಹೋಗಿ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ನಂಬಿದ್ದ ಮಹಿಳೆಗೆ ಭಾರಿ ಆಘಾತವಾಗಿದೆ. ಸಿಟ್ಟು ನೆತ್ತಿಗೇರಿ ಅವರು ದೂರು ನೀಡಿದ್ದು ಇವರ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಂಡಿರುವ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿ, ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವ ತನಕ ಅಂಗಡಿ ತೆರಯದಂತೆ ಸೂಚಿಸಲಾಗಿದೆ.