ನ್ಯೂಸ್ ನಾಟೌಟ್ : ದುರ್ಗಾದೇವಿ ಮೂರ್ತಿ ವಿಸರ್ಜಣೆ ವೇಳೆ ಎರಡು ಗುಂಪುಗಳ ನಡುವೆ ಕೋಮು ಸಂಘರ್ಷ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟ ಪರಿಣಾಮ ಹಲವು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ನ (Bahraich) ಹಳ್ಳಿಯೊಂದರಲ್ಲಿ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬಹ್ರೈಚ್ನ ಮಹ್ಸಿ ಉಪವಿಭಾಗದ ಮೂಲಕ ಸಾಗುತ್ತಿದ್ದ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಜನರು ಪ್ರತಿದಾಳಿ ನಡೆಸಿದ್ದಾರೆ. ಘರ್ಷಣೆಯ ನಂತರ ಜಿಲ್ಲಾಡಳಿತವು ಮಹ್ಸಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 30 ಜನರನ್ನು ಬಂಧಿಸಿದ್ದಾರೆ. ಸಲ್ಮಾನ್ ಎಂದು ಗುರುತಿಸಲಾದ ಒರ್ವ ವ್ಯಕ್ತಿಯನ್ನು ಗುಂಡಿನ ದಾಳಿ ನಡೆಸಿರುವುದು ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ.
ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಹತ್ತು ಜನರಲ್ಲಿ ಆರು ಜನರನ್ನು ಅಬ್ದುಲ್ ಹಮೀದ್, ಸರ್ಫರಾಜ್, ಫಹೀಮ್, ಸಾಹಿರ್ ಖಾನ್, ನಂಕೌ ಮತ್ತು ಮಾರ್ಫ್ ಅಲಿ ಎಂದು ಗುರುತಿಸಿದೆ ಬಾಕಿ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಬೇಕಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯನ್ನು ಖಂಡಿಸಿದ್ದಾರೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
Click