ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ ತಮಗೆ ಬೆನ್ನು ಮತ್ತು ಕೈ ನೋವು ಇರುವ ಕಾರಣ ವಿಶೇಷ ಬೆಡ್ ಬೇಕೆಂದು, ಮನೆ ಊಟ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅದನ್ನು ನೀಡಲಾಗಿರಲಿಲ್ಲ. ನ್ಯಾಯಾಲಯದ ಹೋರಾಟವೂ ವ್ಯರ್ಥವೇ ಆಗಿತ್ತು. ಆ ಬಳಿಕ ಬಳ್ಳಾರಿ ಜೈಲು ಸೇರಿರುವ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದೆ. ಆದರೆ ದರ್ಶನ್ ಬೆನ್ನು ನೋವು ಕಾರಾಗೃಹ ಸಿಬ್ಬಂದಿಗೆ ತಲೆನೋವಾಗಿ ಕಾಡುತ್ತಿದೆ.
ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದ್ದು, ಕಾರಾಗೃಹದ ವೈದ್ಯರು ವೀಕ್ಷಿಸಿ ಪೇಯಿನ್ ಕಿಲ್ಲರ್ ನೀಡಿದ್ದಾರೆ. ಅದಾದ ಬಳಿಕ ಹೊರಗಿನಿಂದ ವೈದ್ಯರನ್ನು ಕರೆಸಿ ತೋರಿಸಲಾಗಿದೆ. ವೈದ್ಯರು ಎಂಆರ್ಐ ಮತ್ತು ಇತರೆ ಕೆಲ ಸ್ಕ್ಯಾನ್ಗೆ ಸಲಹೆ ನೀಡಿದ್ದಾರೆ. ಆದರೆ ದರ್ಶನ್ ತಾವು ಯಾವುದೇ ಸ್ಕ್ಯಾನ್ಗೆ ಒಳಗಾಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ನಾನು ಚಿಕಿತ್ಸೆ ಪಡೆದುಕೊಂಡರೆ ಅದು ಬೆಂಗಳೂರಿನಲ್ಲೇ ಎಂದು ಪಟ್ಟು ಹಿಡಿದಿದ್ದಾರೆ. ಇದು ಪೊಲೀಸರಿಗೆ ತಲೆ ನೋವಾಗಿದೆ.
ದರ್ಶನ್ ಅನ್ನು ಬಳ್ಳಾರಿಯ ಬೀಮ್ಸ್ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ಗೆ ಸೂಚನೆ ನೀಡಿದ್ದಾರೆ. ಅಲ್ಲದೆ ದರ್ಶನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದು ಸಹ ಹೇಳಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿಯೇ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ದರ್ಶನ್ ಇದನ್ನು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬಳ್ಳಾರಿಯಲ್ಲಿ ಚಿಕಿತ್ಸೆಯಾಗಲಿ ಅಥವಾ ಇನ್ಯಾವುದೇ ಸ್ಕ್ಯಾನ್ ಆಗಲಿ ಮಾಡಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗಷ್ಟೆ ಮುಗಿದಿದ್ದು, ಸೋಮವಾರದಂದು ಜಾಮೀನು ಅರ್ಜಿಯ ತೀರ್ಪು ಹೊರಬೀಳಲಿದೆ. ಜಾಮೀನಿನಲ್ಲಿ ಹೊರಬಂದ ಬಳಿಕವೇ ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಿರುವಂತಿದೆ ಎಂದು ವರದಿ ತಿಳಿಸಿದೆ.
Click