ನ್ಯೂಸ್ ನಾಟೌಟ್: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಸಂಪನ್ನಗೊಂಡಿದೆ. ಆದರೆ, ಈ ಬಾರಿಯ ಜಂಬೂಸವಾರಿಯಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಗೈರಾಗಿದ್ದದ್ದು ಹಲವು ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿ ವರ್ಷ ದಸರಾ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಹಬ್ಬದ ವೇಳೆಯೇ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನನವಾಗಿದೆ.
ಯದುವೀರ್ ಅವರಿಗೆ ಕಂಕಣ ಧಾರಣೆ ನಂತರ ಮಗು ಜನಿಸಿದ್ದರಿಂದ ಅರಮನೆಯಲ್ಲಿನ ದಸರಾ ಧಾರ್ಮಿಕ ಕಾರ್ಯವನ್ನು ಯದುವೀರ್ ಮುಂದುವರಿಸಿದ್ದರು. ಆದರೆ ಕಂಕಣ ವಿಸರ್ಜನೆಯಾದ ಬಳಿಕ ಮತ್ತೆ ಜನನ ಸೂತಕ ಅನ್ವಯವಾದ ಹಿನ್ನೆಲೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆಯಲ್ಲಿ ಯದುವೀರ್ ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.
ಇಲ್ಲಿ ಸರ್ಕಾರ ಚಾಮುಂಡೇಶ್ವರಿ ದೇಗುಲಕ್ಕೆ ಹೊಸ ಸಮಿತಿ ರಚಿಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಅಸಮಾದಾನವು ಕಾರಣ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಅರಮನೆಯಲ್ಲಿ ಅಕ್ಟೋಬರ್ 3ರಂದು ಶರನ್ನವರಾತ್ರಿಯ ಮೊದಲ ದಿನ ಯದುವೀರ್ ಒಡೆಯರ್ ಒಂಬತ್ತು ದಿನಗಳ ಖಾಸಗಿ ದರ್ಬಾರ್ ಆರಂಭಿಸಿದರು. ಈ ಧಾರ್ಮಿಕ ಕಾರ್ಯಗಳಲ್ಲಿ ಯದುವೀರ್ ಜತೆಗೆ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಕೂಡ ಇದ್ದರು. ಆದರೆ ಆಯುಧ ಪೂಜೆ ದಿನದಂದು ತ್ರಿಷಿಕಾ ಒಡೆಯರ್ ಅವರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ.
Click