ನ್ಯೂಸ್ ನಾಟೌಟ್: ಮಕ್ಕಳು ಜೀವನದಲ್ಲಿ ಶಿಸ್ತು , ತಾಳ್ಮೆ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸಂಪತ್ತಾಗಲು ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿಕೊಡಬೇಕು, ಈ ವಿಚಾರವನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಎನ್ನೆಂಸಿ ನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ ವಿದ್ವಾಂಸರಾದ ಡಾ. ಪೂವಪ್ಪ ಕಣಿಯೂರು ತಿಳಿಸಿದರು.
ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅ.09ನೇ ಬುದವಾರದಂದು ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಸಭೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮಾತನಾಡಿ ಕಾಲೇಜಿನ ಸಮಗ್ರ ಅಭಿವೃದ್ಧಿಯನ್ನು ಬೆಳೆಸುವಲ್ಲಿ ರಕ್ಷಕ ಶಿಕ್ಷಕ ಸಂಘ ಬಹಳ ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ರಿ. ಸುಳ್ಯದ ಕಾರ್ಯದರ್ಶಿಗಳಾದ ಹೇಮನಾಥ ಕುರುಂಜಿ ಪೋಷಕರ ಜವಾಬ್ದಾರಿಗಳ ಕುರಿತು ಮಾತನಾಡಿ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ರಕ್ಷಕ ಶಿಕ್ಷಕ ಸಂಘದ 2024-25ನೇ ಶೈಕ್ಷಣಿಕ ವರ್ಷದ ಪೋಷಕ ಪ್ರತಿನಿಧಿಗಳನ್ನು ಆರಿಸಿ ಅವರ ಮೂಲಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್, ಉಪಾಧ್ಯಕ್ಷರಾಗಿ ಸುಂದರ ಕೆ ಆಯ್ಕೆಗೊಂಡರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಿನ್ನಪ್ಪ ಗೌಡ ಕೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿ ರತ್ನಾವತಿ ಡಿ, ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಡಾ. ಮಮತ ಕೆ ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಧರ್ ವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಶ್ರೀಲಯ ಪ್ರಾರ್ಥಿಸಿ, ಬಿಬಿಎ ಉಪನ್ಯಾಸಕರಾದ ಹರಿಪ್ರಸಾದ್ ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಮತ್ತು ಸಸ್ಯಶಾಸ್ತ್ರ ಉಪನ್ಯಾಸಕ ಕುಲದೀಪ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಚಿತ್ರಲೇಖ, ವಿಷ್ಣುಪ್ರಶಾಂತ್, ದೀಕ್ಷಾ ಇನ್ನಿತರರು ಸಹಕರಿಸಿದರು.