ನ್ಯೂಸ್ ನಾಟೌಟ್: ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ರೂ.4 ಲಕ್ಷಕ್ಕೆ ಮಾರಾಟ ಮಾಡಿದ ಜಾಲ ಭೇದಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆಯ ಎಂ.ಕೆ.ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್ ಕುಮಾರ್ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್, ಮಂಜಮ್ಮ, ಬಂಧಿತರು ಎಮದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಟಿ.ಎನ್.ಕವಿತಾ ಮತ್ತು ತಂಡ ವಿನೋಭನಗರದಲ್ಲಿರುವ ಜಯ ಮತ್ತು ಪ್ರಶಾಂತ್ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಜನನ ಪ್ರಮಾಣಪತ್ರ ಸೇರಿ ಹಲವು ನಕಲಿ ಪ್ರಮಾಣಪತ್ರಗಳನ್ನು ವಶಕ್ಕೆ ಪಡೆದರು.
ಜಯಾ ಹಾಗೂ ಪ್ರಶಾಂತ್ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿತ್ತು. ದಾಖಲೆಗಳನ್ನು ಆಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿದಾಗ ಮಕ್ಕಳ ಮಾರಾಟ ವಿಚಾರ ಖಚಿತವಾಗಿದೆ.
ಮದುವೆಯಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದ ಕಾವ್ಯಾ ಅವರು ಕೆಲ ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗು ಮಾರಾಟ ಮಾಡಲು ನಿರ್ಧರಿಸಿದ್ದರು. ಇತ್ತ ಮದುವೆಯಾಗಿ 7 ವರ್ಷಗಳು ಕಳೆದರೂ ಜಯಾ ಹಾಗೂ ಪ್ರಶಾಂತ್ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಧ್ಯವರ್ತಿ ವಾದಿರಾಜ್ ಮೂಲಕ ಮಗುವನ್ನು ರೂ.4 ಲಕ್ಷಕ್ಕೆ ಪಡೆದಿದ್ದರು.
Click