ನ್ಯೂಸ್ ನಾಟೌಟ್: ಜಾತಿ ಗಣತಿ ಅನುಷ್ಠಾನಗೊಳಿಸುವ ಮುನ್ನ ರಾಜ್ಯ ಸರ್ಕಾರವು ಮರು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ. ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಸರ್ಕಾರ ಮತ್ತೊಮ್ಮೆ ಜಾತಿ ಜನಗಣತಿ ಮಾಡಲಿ ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಈಗ ಇರುವ ಕಾಂಗ್ರೆಸ್ ಸರ್ಕಾರ ಮಾಡಿರುವ ಜಾತಿಗಣತಿಯು ಪಕ್ಷಪಾತವಾಗಿದೆ ಎಂದಿದ್ದಾರೆ.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ನಡೆದ ಧರ್ಮ ಧ್ವಜ ಪ್ರತಿಷ್ಠಾಪನ ಮಹೋತ್ಸವದಲ್ಲಿ ಮಾತನಾಡಿದ,”ರಾಜ್ಯದಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸೇರಿದಂತೆ ನೂರಾರು ಸಣ್ಣ ಸಣ್ಣ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಜಾತಿ ಜನಗಣತಿ ಮತ್ತೊಮ್ಮೆ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಜಾತಿ ಜನಗಣತಿ ಮಾಡಿಸಿ ಹಲವಾರು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು” ಎಂದರು.
ಒಕ್ಕಲಿಗ, ವೀರಶೈವ, ಆರ್ಯವೈಶ್ಯ ಸೇರಿದಂತೆ ಪ್ರತಿಷ್ಠಿತ ಸಮುದಾಯಗಳಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಇಂತಹ ಬಡ ಕುಟುಂಬಗಳ ಪ್ರಗತಿಗೆ ಜಾತಿ ಜನಗಣತಿ ಕೈಗನ್ನಡಿಯಾಗಬೇಕು. ಸರ್ವರಿಗೂ ಸಮ ಬಾಳು -ಸಮಪಾಲು ಎಂಬ ಭಾವನೆಯೊಂದಿಗೆ ವಸ್ತುನಿಷ್ಠ ವರದಿ ಪಡೆಯುವ ಉದ್ದೇಶದಿಂದ ಪ್ರತಿ ಮನೆ ಮನೆಗೂ ತೆರಳಿ ಜಾತಿ ಜನಗಣತಿ ಮತ್ತೊಮ್ಮೆ ಮಾಡಬೇಕು. ಈ ಮೂಲಕ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನದ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆತುರದ ನಿರ್ಧಾರ ಮಾಡಿ ಜಾತಿ ಜನಗಣತಿ ಅನುಷ್ಠಾನ ಮಾಡಬಾರದು, ಮತ್ತೊಮ್ಮೆ ಪರಿಶೀಲನೆ ಮಾಡಿ ಎಂದು ಶ್ರೀಗಳು ಆಗ್ರಹಿಸಿದರು.