ನ್ಯೂಸ್ ನಾಟೌಟ್: ರಾಜ್ಯದ ಹಲವೆಡೆ ಕಾಣಿಸಿಕೊಂಡಿದ್ದ ಮತಾಂತರ ಪ್ರಕರಣ ಇದೀಗ ಕೊಡಗು ಜಿಲ್ಲೆಗೂ ಕಾಲಿಟ್ಟಿದೆ. ಇಲ್ಲಿನ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಮೂರು ಎಕರೆ ಪೈಸಾರಿ ಕಾಲೋ ನಿಯಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಕೇರಳ ಮೂಲದ ಕ್ರೈಸ್ತದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರು ಎಕರೆ ಪೈಸಾರಿಯ ಪಣಿ ಎರವರ ಮುತ್ತ ಎಂಬುವವರ ಮನೆಗೆ ಬಂದ ಕೇರಳದ ಮಾನಂದವಾಡಿಯ ಕುರಿಯಚ್ಚನ್ ಹಾಗೂ ಆತನ ಪತ್ನಿ ಬಲವಂತದ ಮತಾಂತರಕ್ಕೆ ಯತ್ನಿಸಿರುವುದಲ್ಲದೆ ಆಮಿಷವೊಡ್ಡಿರುವುದಾಗಿ ಆರೋಪಿಸಲಾಗಿದೆ. ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿರುವ ಮುತ್ತ ತಮ್ಮನ್ನು ಮತಾಂತರಗೊಳಿಸಲು ದಂಪತಿ ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ. ಕ್ರೈಸ್ತದಂಪತಿಗಳು ಮತಾಂತರ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸ್ಥಳಕ್ಕೆ ಬಂದ ಬಿಜೆಪಿ ಹಾಗೂ ಹಿಂದೂ ಸಂಘನೆಗಳ ಪ್ರಮುಖರು ನೂತನ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಬಾಡಗ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ನವೀನ್ ಪೆಮ್ಮಣಮಾಡ, ಬೂತ್ ಅಧ್ಯಕ್ಷ ಜಾಯ್ ಅಯ್ಯಪ್ಪ, ಕುಟ್ಟ ಗ್ರಾ.ಪಂ ಸದಸ್ಯೆ ಹಾಗೂ ಮಾತೃ ಮಂಡಳಿ ತಾಲ್ಲೂಕು ಅಧ್ಯಕ್ಷೆ ತೀತಿರ ತೀರ್ಥ ಮಂಜು ನಾಥ್, ಬಜರಂಗದಳ ತಾಲ್ಲೂಕು ಸಂಚಾಲಕ ಸಜು ಗಣಪತಿ, ಧರ್ಮ ಜಾಗರಣ ಸ್ವಯಂ ಸೇವಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾ ಧ್ಯಕ್ಷ ಸುರೇಶ್ ಮುತ್ತಪ್ಪ ಅವರು ಮತಾಂತರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೊಡಗಿನ ದುರ್ಬಲ ವರ್ಗವನ್ನು ಗುರಿಯಾಗಿಸಿಕೊಂಡು ಆಮಿಷವೊಡ್ಡುವ ಮೂಲಕ ಬಲವಂತದ ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದು ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.