ನ್ಯೂಸ್ ನಾಟೌಟ್: ಮಂಗಳೂರಿನ ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಝ್ ಅಲಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಸಾಮಾಜಿಕ – ಧಾರ್ಮಿಕ ಮುಂದಾಳು ಮುಮ್ತಾಝ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) 173ರ ಅಡಿ ಎಫ್ ಐ ಆರ್ ದಾಖಲಾಗಿದೆ.
ಮುಮ್ತಾಝ್ ಅಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್ ಸೇರಿದಂತೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ರೆಹಮತ್ ಎಂಬವರು ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ 2024 ರ ಜುಲೈ ಯಿಂದ ಇದುವರೆಗೂ 50 ಲಕ್ಷ ರೂ.ಗಿಂತಲು ಅಧಿಕ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆದರಿಸಿ 25 ಲಕ್ಷ ರೂ. ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೈದರ್ ಅಲಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರೆಹಮತ್ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾ, ನಿರಂತರ ಕಿರುಕುಳ ನೀಡಿ ಹಣವನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಆರೋಪಿಗಳು ಹೆದರಿಸಿದ್ದರು. ಕುಟುಂಬದ ಸದಸ್ಯರಿಗೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹುಡುಕಾಟ ಇಂದೂ(ಅ.7) ಕೂಡ ಮುಂದುವರಿಯಲಿದೆ.