ನ್ಯೂಸ್ ನಾಟೌಟ್ : ಪ್ರತಿಯೊಬ್ಬರೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರಿಸರವನ್ನು ಪ್ರೀತಿಸುವುದರಿಂದ ತನ್ನ ಜವಾಬ್ದಾರಿ ಅರಿತು ಬದುಕಬೇಕು. ಆಗ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪ್ರಕೃತಿಯನ್ನು ಉಳಿಸಬಹುದು. ಪರಿಸರ ಉಳಿಸಿ ಹೋರಾಟ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಬಾರದು, ನೈಜ ಪರಿಸರ ವ್ಯವಸ್ಥೆಗಳನ್ನು ಅರಿತುಕೊಂಡು ಅವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದೇ ನಿಜವಾದ ಪರಿಸರ ಕಾಳಜಿ ಎಂದು ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಉಪ-ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಅಭಿಪ್ರಾಯಪಟ್ಟರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ’ ಕುರಿತು ಶನಿವಾರ (ಸೆ. 28) ಜೂನಿಯರ್ ಕಾಲೇಜಿನ ಸ್ವರ್ಣಶ್ರೀ ಸಭಾಂಗಣದಲ್ಲಿ ಆಯೋಜಿಸಿದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಘಟ್ಟಗಳ ವನ್ಯಜೀವಿ ಅಧ್ಯಯನ ಮತ್ತು ಸಂರಕ್ಷಣೆ ಯೋಜನೆಗಳಲ್ಲಿ ಸತತ ಭಾಗವಹಿಸುತ್ತಿರುವ ಭುವನೇಶ್ವರ ಕೈಕಂಬ ಮಾತನಾಡಿ, ಕಾಡಿನ ಪ್ರತಿ ಜೀವಸಂಕುಲದ ಅನನ್ಯ ಕೊಡುಗೆಗಳ ಬಗ್ಗೆ, ಕಾಡಿನ ಸಂರಕ್ಷಣೆಗೆ ವನ್ಯಜೀವಿಗಳ ಅಗತ್ಯತೆ ಹಾಗೂ ಅವುಗಳ ಉಳಿವಿಗೆ ನಾವು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಲವಾರು ಇಲಾಖೆಗಳ ವಿಜ್ಞಾನಿಗಳ ಜೊತೆಗೂಡಿ ವಿದ್ಯಾರ್ಥಿಗಳು ಭಾಗವಹಿಸಬಹುದಾದ ಅಧ್ಯಯನ, ಸಂಶೋಧನೆ ಸಂಬಂಧಿತ ಅವಕಾಶಗಳ ಬಗ್ಗೆ ತಿಳಿಸಿದರು.
ಗೌರವ ಅತಿಥಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ಹಿರಿಯ ವಿದ್ಯಾರ್ಥಿ ಹಾಗೂ ಎನ್ನೆಂಸಿ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಮಾತನಾಡಿ, ತನ್ನ ಕಾಲೇಜು ಜೀವನವನ್ನು ನೆನಪಿಸಿಕೊಂಡು ಹಿಂದೆ ಬಳಸುತ್ತಿದ್ದ ನದಿ ನೀರಿನ ಶುಭ್ರತೆಯನ್ನು ಪ್ರಸ್ತಾಪಿಸಿ ಇಂದು ಶುದ್ಧ ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ ನಾವು ಇನ್ನಾದರೂ ಜಾಗೃತರಾದರೆ ಮಾತ್ರ ಮುಂದೆ ಆಮ್ಲಜನಕವನ್ನು ಈ ರೀತಿ ಪಡೆದುಕೊಳ್ಳುವ ಪರಿಸ್ಥಿತಿಯಿಂದ ಪಾರಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಬಿ ಕೆ ವಹಿಸಿದ್ದರು. ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಮನಸ್ವಿ ಮತ್ತು ತಂಡದವರು ಪ್ರಾರ್ಥಿಸಿ, ಕಾರ್ತಿಕ್ ಜಿ. ಶರ್ಮಾ ಅತಿಥಿಗಳನ್ನು ಪರಿಚಯಿಸಿ, ನೇಚರ್ ಕ್ಲಬ್ ಕಾರ್ಯದರ್ಶಿ ಶಿಲ್ಪಾ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸೀತಾ ಅಶೋಕ ಗಿಡವನ್ನು ಕಾಲೇಜು ಆವರಣದ ಒಳಗೆ ನೆಡಲಾಯಿತು. ಎನ್ನೆಂಸಿ ಜೀವ ವಿಜ್ಞಾನ ಪದವಿ ವಿಭಾಗದ ಉಪನ್ಯಾಸಕರಾದ ಕೃತಿಕಾ, ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮತ್ತು ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಡಾ. ನವೀನ್ ಜಿ ಪಿ ಎ ಎನ್ ಹಾಗೂ ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೇಚರ್ ಕ್ಲಬ್ ಸದಸ್ಯರು ಕೆಲವು ಪರಿಸರ ಗೀತೆಗಳನ್ನು ಹಾಡಿದರು. ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.