ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ ಅಂದ್ರ ಕೋಮು ಸೂಕ್ಷ್ಮ ಪ್ರದೇಶ. ಯಾರದ್ದೋ ಪಿತೂರಿಗೆ, ಇನ್ಯಾರದ್ದೋ ಸ್ವಾರ್ಥಕ್ಕೆ ಧರ್ಮದ ಹೆಸರಿನಲ್ಲಿ ಇಲ್ಲಿ ಪದೇ..ಪದೇ ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಇಂತಹ ನೆಲದಲ್ಲಿ ಇದೀಗ ಭಾವೈಕ್ಯದ ಸಂದೇಶವೂ ಹೊನಲಾಗಿ ಹರಿದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ.
ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ (ತಂಬಿನಡ್ಕ) ಎಂಬಲ್ಲಿ ಅಬ್ದುಲ್ ಜಬ್ಬಾರ್ ಅನ್ನುವವರ ಕುಟುಂಬ ವಾಸವಿದೆ. ಅಬ್ದುಲ್ ಜಬ್ಬಾರ್ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ‘ಅಂಚೆಯಣ್ಣ’ ಎಂದೇ ಊರಿನಲ್ಲಿ ಖ್ಯಾತಿ ಪಡೆದುಕೊಂಡಿದ್ದರು. ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆ ಇದ್ದ ಹಾಗೆ ಅನ್ನುವ ಮಾತಿದೆ. ಈ ಮಾತು ಅಬ್ದುಲ್ ಜಬ್ಬಾರ್ ಅವರ ಬದುಕಿನಲ್ಲಿ ಅಕ್ಷರಶಃ ನಿಜವಾಗಿ ಬಿಟ್ಟಿತು. ಆಗಸ್ಟ್ 13ರಂದು ಅಬ್ದುಲ್ ಜಬ್ಬಾರ್ ಹಠಾತ್ ವಿಧಿವಶರಾದರು. ಇಂತಹ ಸಂದರ್ಭದಲ್ಲಿ ಇವರನ್ನೇ ನಂಬಿಕೊಂಡಿದ್ದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಊರಿನ ಹಿಂದೂ ಬಾಂಧವರಲ್ಲೆರು ಒಟ್ಟು ಸೇರಿ ಧನ ಸಹಾಯಕ್ಕೆ ಟೊಂಕಕಟ್ಟಿ ನಿಂತರು.
ಅನಂತರಾಮ ಮಣಿಯಾನ ಮನೆ, ಟಿ.ಶ್ರೀಧರ್ ನಾಯರ್, ಶೇಖರ್ ಅಂಬೆಕಲ್ಲು, ಸಚಿತ್ ಶಿವಾಲ, ಹೇಮಲತಾ ಶುಭಕರ ಕೊಮ್ಮೆಮನೆ, ದಿನೇಶ್ ಕುಮಾರ್ ಮಡ್ತಿಲ ಮತ್ತಿತರರು ಸೇರಿಕೊಂಡು ವಾಟ್ಸಾಪ್ ಮೂಲಕ ಧನ ಸಂಗ್ರಹ ಮಾಡಿದರು. ಇವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಒಟ್ಟು ₹ 1, 23,650 ಸಂಗ್ರಹಗೊಳ್ಳುತ್ತದೆ. ಇದರ ಮೊತ್ತವನ್ನು ಸೆ.26 ರಂದು ಕೊಲ್ಲಮೊಗರು ಅಂಚೆ ಕಚೇರಿಯಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಬದುಕಿದ್ದಷ್ಟು ದಿನ ಅಬ್ದುಲ್ ಜಬ್ಬಾರ್ ಸಮಾಜಕ್ಕಾಗಿ ದುಡಿದರು, ನಾಲ್ಕು ಜನರ ಪ್ರೀತಿ, ಸ್ನೇಹ ಸಂಪಾದಿಸಿದರು, ಹೀಗಾಗಿ ಅವರ ಮರಣನಂತರವೂ ಜನರಿಗೆ ಅಷ್ಟೇ ಪ್ರೀತಿ, ಗೌರವ, ಸಹಾಯ ದೊರಕಿತು. ಇಂತಹ ಘಟನೆಗಳು ಮಾನವೀಯ ಸಮಾಜದಲ್ಲಿ ನಡೆಯುವುದು ನಿಜಕ್ಕೂ ಶ್ಲಾಘನೀಯ, ಇನ್ನಷ್ಟು ಜನರಿಗೆ ಇಂತಹ ಸಾಮಾಜಿಕ ಕಾರ್ಯ ಸ್ಪೂರ್ತಿಯಾಗಬಲ್ಲದು.