ನ್ಯೂಸ್ ನಾಟೌಟ್ : ವಿಷಕಾರಿಯಾದ ಕಾಳಿಂಗ ಸರ್ಪವನ್ನು ಕಚ್ಚಿ ಸಾಯಿಸುವ ಮೂಲಕ ಪಿಟ್ ಬುಲ್ ತಳಿಯ ಸಾಕು ನಾಯಿ ಮಕ್ಕಳ ಜೀವ ಉಳಿಸಿದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಂಗಳವಾರ ನಡೆದಿದೆ.
ಝಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿನ ಮನೆಯ ಎದುರಿನ ಅಂಗಳದಲ್ಲಿ ಮನೆ ಕೆಲಸದವರ ಮಕ್ಕಳು ಆಟವಾಡುತ್ತಿದ್ದರು. ಹಠಾತ್ತನೆ ಅವರ ಮುಂದೆ ಸರ್ಪವೊಂದು ಬಂದಿತ್ತು. ಅದನ್ನು ಕಂಡು ಭಯಭೀತರಾದ ಅವರು ಸಹಾಯಕ್ಕಾಗಿ ಕಿರುಚಾಡತೊಡಗಿದ್ದರು. ಮಕ್ಕಳ ಅಳು ಕೇಳಿಸಿಕೊಂಡ ಜೆನ್ನಿ ಎಂಬ ಹೆಸರಿನ ಪಿಟ್ ಬುಲ್, ಗಾರ್ಡನ್ನ ಇನ್ನೊಂದು ಬದಿಯಲ್ಲಿ ತನ್ನನ್ನು ಕಟ್ಟಿ ಹಾಕಿದ್ದ ಹಗ್ಗವನ್ನು ಕಿತ್ತು ಹರಿದು ಅವರ ರಕ್ಷಣೆಗೆ ಧಾವಿಸಿದೆ.
ಹಾವಿನತ್ತ ನುಗ್ಗಿದ ಜೆನ್ನಿ, ಅದನ್ನು ಎಳೆದಾಡಿ ತನ್ನ ದವಡೆಗಳಲ್ಲಿ ಕಚ್ಚಿ ಹಿಡಿದಿದೆ. ನಿರಂತರವಾಗಿ ಕಚ್ಚುತ್ತಿದ್ದ ನಾಯಿಯ ಬಾಯಿಯಿಂದ ತಪ್ಪಿಸಿಕೊಳ್ಳಲು ಹಾವು ಸಾಕಷ್ಟು ಹೋರಾಡಿದೆ. ಆದರೆ ಐದು ನಿಮಿಷಗಳ ಕಾದಾಟದ ಬಳಿಕ ಶ್ವಾನದ ಪರಾಕ್ರಮದ ಎದುರು ಹಾವು ಸಾವನ್ನಪ್ಪಿದೆ. ಆ ಹಾವು ಸತ್ತಿದೆ ಎಂದು ಖಚಿತವಾಗುವವರೆಗೂ ಜೆನ್ನಿ ತನ್ನ ಹಿಡಿತವನ್ನು ಸಡಿಲಿಸಿರಲಿಲ್ಲ.
ಅಂದಹಾಗೆ, ಜೆನ್ನಿಗೆ ಇದು ಮೊದಲ ಹಾವಿನ ಬೇಟೆ ಅಲ್ಲ. ಅದು ಈಗಾಗಲೇ ಹಲವಾರು ಹಾವುಗಳನ್ನು ಕೊಂದು ಜೀವಗಳನ್ನು ಉಳಿಸಿದೆ ಎಂದು ಅದರ ಮಾಲೀಕ ಪಂಜಾಬ್ ಸಿಂಗ್ ತಿಳಿಸಿದ್ದಾರೆ.
Click