ನ್ಯೂಸ್ ನಾಟೌಟ್: ಜಾಲ್ಸೂರಿನ ಭಾರತಿ ಅಜ್ಜಿ ಅನ್ನುವವರು ಮಗನಿಗೆ ಒಂದೂವರೆ ವರ್ಷವಾಗಿದ್ದಾಗ ಸಾಂಸಾರಿಕ ಕಲಹದಿಂದ ದೂರವಾಗಿ ಗೋವಿನೊಂದಿಗೆ ವಾಸವಾಗಿದ್ದರು. ಇದೀಗ ವೃದ್ಧಾಪ್ಯದಲ್ಲಿ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಅಜ್ಜಿಯನ್ನು ಮತ್ತೆ ಮಗನೊಂದಿಗೆ ಸೇರಿಸಿ ಗೋವನ್ನು ರಾಮಚಂದ್ರಾಪುರ ಮಠದ ಜೇಡ್ಲ ಗೋಶಾಲೆಗೆ ಕಳುಹಿಸಿಕೊಟ್ಟು ಎರಡು ಅಮೂಲ್ಯ ಜೀವಗಳ ಉಳಿಸಿದ ‘ನ್ಯೂಸ್ ನಾಟೌಟ್’ ಸಂಸ್ಥೆಯ ಕಾರ್ಯಕ್ಕೆ ರಾಜ್ಯದ ಓದುಗ ಪ್ರಭುಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಹೊಸ ನಗರ ರಾಮಚಂದ್ರಾಪುರ ಮಠದ ಗೋ ಸೇವಕಿ ಸ್ವರ್ಣ ಗೌರಿ ಭಟ್ ‘ನ್ಯೂಸ್ ನಾಟೌಟ್’ ಗೆ ಕರೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದರು. ಅಲ್ಲದೆ ವಿಶೇಷ ಅಂಕಣ ಬರೆದು ಉತ್ತಮ ಕಾರ್ಯವನ್ನು ಸ್ಮರಿಸಿದ್ದರು. ಇದೀಗ ಬೆಂಗಳೂರಿನ ರಶ್ಮಿ ಗೋಖಲೆ ಅನ್ನುವವರು ಕೂಡ ‘ನ್ಯೂಸ್ ನಾಟೌಟ್’ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಂಕಣ ಬರೆದಿದ್ದಾರೆ. ಇದರ ಪೂರ್ಣ ಪಾಠ ಇಲ್ಲಿದೆ ಓದಿ..
ಒಂದಾನೊಂದು ಕಾಲದಲ್ಲಿ ಒಂದು ಹಸು ಮತ್ತು ಒಬ್ಬ ಹಿರಿವಯಸ್ಸಿನ ಮಹಿಳೆ ವಾಸವಾಗಿದ್ದರಂತೆ ಎಂಬ ಸಾಂಪ್ರದಾಯಿಕ ಒಕ್ಕಣೆಯಿಂದ ಪ್ರಾರಂಭವಾಗುವ ಕಥೆಯ ಪ್ರಕಾರಕ್ಕೆ ಇದು ಸೇರಿಲ್ಲವಾದರೂ ಮುಂದೊಮ್ಮೆ ಈ ಒಕ್ಕಣೆ ಪ್ರಸ್ತುತವಾದೀತು. ಕಥೆಯೆಂದರೆ ಕಾಲ್ಪನಿಕ ಸನ್ನಿವೇಶಗಳಾಗಿರದೆ ನಮ್ಮ ನಡುವೆ ಜೀವಿಸುತ್ತಿರುವ ಎರಡು ಸಾತ್ವಿಕ ಜೀವಗಳ ಸ್ಟೋರಿ ಅನ್ನಬಹುದು..
‘ನ್ಯೂಸ್ ನಾಟೌಟ್’ ಅನ್ನುವ ಒಂದು ದೃಶ್ಯ ಮಾಧ್ಯಮದಲ್ಲಿ ಹೇಮಂತ್ ಸಂಪಾಜೆ ಅನ್ನುವವರು ಒಂದು ಅಜ್ಜಿ ಹಾಗೂ ಹಸು ಸಹಬಾಳ್ವೆ ನಡೆಸಿದ ವಿಡಿಯೋ ಮಾಡಿದ್ದರು. ಅದು ಕೆಲವು ಕಂತುಗಳಲ್ಲಿ ಪ್ರಸಾರವಾಯಿತು. ಸುಳ್ಯದ ಜಾಲ್ಸೂರು ಬಳಿ ಒಬ್ಬ ವಯಸ್ಸು ಮಾಗಿದ ಮಹಿಳೆ ಮತ್ತು ಒಂದು ಹಸು ಒಂದೇ ಗುಡಿಸಲಿನಲ್ಲಿ ವಾಸವಿದ್ದ ಅಪರೂಪದ ದೃಶ್ಯಾವಳಿಗಳನ್ನು ತೋರಿಸಿದ್ದರು. ಅವರಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಅನ್ಯೋನ್ಯ ವೆಂದರೆ ಮಹಿಳೆ ತಿನ್ನುತ್ತಿದ್ದ ತಿಂಡಿಯಲ್ಲೇ ಅವರ ಹಸು ಕಾಮಧೇನುವಿಗೂ ಪಾಲಿರುತ್ತಿತ್ತು. ಕಾಮಧೇನು ಕೂಡ ಹೆಚ್ಚು ಹುಲ್ಲು ತಿನ್ನದೇ ತನ್ನ ಸಹಜೀವಿ ಮಹಿಳೆ ಮಾಡಿ ಪ್ರೀತಿಯಿಂದ ಬಡಿಸುತ್ತಿದ್ದ ದೋಸೆ, ರೊಟ್ಟಿಗಳನ್ನು ತಿಂದು ಚಹಾ ಕುಡಿದು ತೃಪ್ತವಾಗಿರುತ್ತಿತ್ತು. ಹೆಚ್ಚು ಸಲ ಸೆಗಣಿ ಹಾಕುವುದಾಗಲೀ ಗೋಮೂತ್ರ ಹರಿಸುವಾಗಲೀ ಮಾಡದೆ ದಿನಕ್ಕೆರಡೇ ಬಾರಿ ಶಿಸ್ತಿನಿಂದ ಮಾಡುತ್ತಿತ್ತು. ಹಾಗಾಗಿ ಭಾರತಿಯವರು ( ವಿಡಿಯೋದಲ್ಲಿ ಅಜ್ಜಿ ಎಂದೇ ಆ ಮಹಿಳೆಯನ್ನು ಸಂಬೋಧಿಸುತ್ತಿದ್ದುದು) ತನ್ನ ಗುಡಿಸಲನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದರು. ರಾತ್ರಿಯ ವೇಳೆ ಹಸು ಕಾಮಧೇನು ಅಜ್ಜಿಯ ಮಗ್ಗುಲಲ್ಲೇ ಮಲಗುತ್ತಿದ್ದುದು. ಹಸುಗೆ ಇಪ್ಪತ್ತರ ಆಸುಪಾಸು ಭಾರತಿಯವರಿಗೆ ೮೦ ರ ಆಸುಪಾಸು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಅವರವರ ವರ್ಗಕ್ಕೆ ಹೋಲಿಸಿದರೆ ಹಿರಿಯ ವಯಸ್ಸೆಂದೇ ಹೇಳಬಹುದು. ಕಾಮಧೇನುವನ್ನು ಮೇಯಲು ಹೊರಗೆ ಬಿಡುತ್ತಿದ್ದರೋ ಅದು ಕರುಗಳನ್ನು ಹಾಕಿತ್ತೋ ಯಾವ ಮಾಹಿತಿಯೂ ಲಭ್ಯವಿಲ್ಲ. ಭಾರತಿಯವರೊಂದಿಗೆ ಗುಡಿಸಲಿನಲ್ಲಿ ಸಹವಾಸ ಯಾವಾಗಲಿಂದ ಎಂದೂ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಮನುಷ್ಯರಂತೆ ದೋಸೆ ರೊಟ್ಟಿ ತಿಂದು ಬಿಸಿ ಚಹಾ ಕುಡಿಯುವ ಗೋವು ಅನ್ನುವುದು ವಿಶೇಷ. ಎರಡೂ ಮುಗ್ಧ ಜೀವಿಗಳು ಒಬ್ಬರಿಗೊಬ್ಬರು ಜೊತೆಗಾರರಾಗಿ ಝೋಪಡಿಯಲ್ಲಿ ಜೀವನ ನಡೆಸುವಾಗ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗದಿದ್ದುದು ಸುದೈವ.
ಇಂತಿಪ್ಪ ಭಾರತಿ ಮತ್ತು ಕಾಮಧೇನು ಬೇರ್ಪಡುವ ದಿನಬರುತ್ತದೆಂದು ಯಾರೂ ಊಹಿಸಿರಲಿಲ್ಲ. ಆದರೆ ವೃದ್ಧಾಪ್ಯದ ಸೈಡ್ ಎಫೆಕ್ಟ್ ಎಂಬಂತೆ ಭಾರತಿಯವರಿಗೆ ಕೂಡಾ ಮೈಯಲ್ಲಿ ಶಕ್ತಿ ಉಡುಗಿ ತಾವು ತನ್ನ ಕುಟುಂಬದ ಜೊತೆಗೆ ಸೇರಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಗೋವಿಗೆ ಸಂಪಾಜೆಯ ರಾಮಚಂದ್ರಾಪುರ ಮಠದ ಜೇಡ್ಲದ ಗೋಶಾಲೆಯಲ್ಲಿ ಬಿಡಲಾಗುತ್ತದೆ. ಬಹಳ ದಿನಗಳವರೆಗೂ ಆ ಮುಗ್ಧ ಗೋವು ಹುಲ್ಲು ಮುಟ್ಟದೇ ಬಹಳ ದುಃಖಿತವಾಗಿ ದಿನಗಳೆಯುತ್ತದೆ. ಗೋಶಾಲೆಯವರಿಗೂ ಅಜ್ಜಿಯ ಮತ್ತು ಈ ಗೋವಿನ ಬಾಂಧವ್ಯ, ಅದರ ಆಹಾರ ಕ್ರಮದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಈ ಹಸು ಉಪವಾಸ ಮಾಡಿ ಸತ್ತೇ ಹೋಗುವುದೇನೋ ಎಂಬ ಭಯ ಶುರುವಾಗುತ್ತದೆ.
ಆ ಸಂದರ್ಭದಲ್ಲಿ ವಿಡಿಯೋ ಮಾಡಿದ ಹೇಮಂತ್ ಸಂಪಾಜೆ ಅವರು ಗೋಶಾಲೆಗೆ ಭೇಟಿ ನೀಡಿ ಕಾಮಧೇನು ಬಗ್ಗೆ ವಿಚಾರಿಸಿದಾಗ ಅದರ ಹೆಸರು ಕಾಮಧೇನು ಎಂಬುದಾಗಿ ಗೊತ್ತಾಗಿ ನಂತರ ಅವರು ಅದೇ ಹೆಸರಲ್ಲಿ ಕೂಗಿದಾಗ ಮೆಲ್ಲನೇ ಆ ಕರೆಗೆ ಸ್ಪಂದಿಸತೊಡಗುತ್ತದೆ. ಅಜ್ಜಿಯೇ ಬಂದರೇನೋ ಎಂದು ಖಂಡಿತವಾಗಿಯೂ ಭಾವಿಸಿರಬಹುದು . ಗೋಶಾಲೆಗೆ ಬಿಡಲು ಬಂದವರು ಒತ್ತು ಶ್ಯಾವಿಗೆ ಮತ್ತು ಬಿಸಿ ಚಹಾ ತಂದಿದ್ದರಂತೆ. ಅಂದಿನ ಉಪಹಾರ ಮುಗಿಸಿದ ನಂತರ ಒಂದು ವಾರದ ಕಠಿಣ ಉಪವಾಸದ ನಂತರ ನಿಧಾನಕ್ಕೆ ಹುಲ್ಲು ತಿನ್ನಲು ಶುರುವಿಟ್ಟಿದೆಯಂತೆ. ಪಾಪ ಆ ಹಸುವಿನ ಮೂಕ ಸಂವೇದನೆ ಎಂತಹವರನ್ನೂ ತಟ್ಟುತ್ತದೆ. ಅದೇ ರೀತಿ ಹಸುವಿಂದ ದೂರವಾದ ಭಾರತಿಯವರಿಗೂ ಈ ಕಾಮಧೇನುವಿನದೇ ಕೊರಗು. ಆ ಎರಡು ಜೀವಗಳ ಪರಸ್ಪರ ಅಗಲಿಕೆ ಕಣ್ಣೀರು ತರಿಸುತ್ತದೆ. ಮೂಕ ಪ್ರಾಣಿಗಳೊಡಗಿನ ನಂಟು ಗೊತ್ತಿಲ್ಲದೇ ಬಹಳ ಅಂಟಾಗಿಬಿಡುತ್ತದೆ. ಅಂಟನ್ನು ಬೇರ್ಪಡಿಸಿದಾಗ ಆಗುವ ಸಂಕಟ ಊಹಿಸಲೂ ಕಷ್ಟ. ಭಾರತಿಯವರು ಕೂಡಾ ಚಿಕಿತ್ಸೆ ಪಡೆದು ಕೊಂಚ ಸುಧಾರಿಸಿಕೊಂಡರೆ ಇತ್ತ ಕಾಮಧೇನು ಕೂಡಾ ನಿಧಾನಕ್ಕೆ ಗೋಶಾಲೆಗೆ ಒಗ್ಗತೊಡಗಿದೆ ಎನ್ನುವುದೇ ಸಮಾಧಾನಕರ ಅಂಶ. ನಮಗೆ ಕೇವಲ ವಿಡಿಯೋ ದಲ್ಲೇ ನೋಡಿದ್ದರೂ ಕೂಡಾ ದಿನಕ್ಕೊಮ್ಮೆಯಾದರೂ ಅಜ್ಜಿ ಮತ್ತು ಹಸು ನೆನಪಾಗುತ್ತಾರೆ. ತಿಂಡಿ ತಿಂದು ಚಹಾ ಕುಡಿಯುವಾಗಲಂತೂ ಕಾಮಧೇನು ತುಂಬಾ ನೆನಪಾಗುತ್ತಾಳೆ. ಇನ್ನು ಅದರ ಜೊತೆಗೇ ಇದ್ದ ಭಾರತಿಯವರ ಗೋಳೆಷ್ಟಿರಬಹುದು? ಊಹಿಸಿಕೊಳ್ಳಲೂ ಕಷ್ಟ.