ನ್ಯೂಸ್ ನಾಟೌಟ್: ‘ಕಲ್ಚರ್ಪೆ ಜನರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ, ಆದರೆ ಕೆಲವರು ಮೂಲನಿವಾಸಿಗಳಲ್ಲದವರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ರಸ್ತೆ ಬಂದ್ ಮಾಡುವುದು, ಪೌರ ಕಾರ್ಮಿಕರಿಗೆ ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ. ಇಂತಹ ಕೆಲಸವನ್ನು ಬಿಟ್ಟು ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಲಿ’ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ತಿಳಿಸಿದ್ದಾರೆ.
ಶನಿವಾರ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ‘ಕಲ್ಚರ್ಪೆಯಲ್ಲಿ ಕಸ ಹಾಕುವುದಕ್ಕೆ ಅಧಿಕೃತ ಕಾನೂನು ಪ್ರಕಾರವಾಗಿ ನಿಗದಿಪಡಿಸಿದ ಜಾಗ. ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ನಾನು ಯಾರಿಂದಲೂ ಲಂಚ ಪಡೆದಿಲ್ಲ, ಲಂಚ ಪಡೆದಿದ್ದೇನೆ ಎಂದು ಆರೋಪ ಮಾಡುವವರು ಕಲ್ಚರ್ಪೆ ವನದುರ್ಗಾ ದೈವಸ್ಥಾನದಲ್ಲಿ ಬಂದು ಪ್ರಮಾಣ ಮಾಡಲಿ, ನಾನು ಕೂಡ ಅಲ್ಲಿಗೆ ಬರುತ್ತೇನೆ’ ಎಂದು ತಿಳಿಸಿದರು.
ಇತ್ತೀಚೆಗೆ ಕಲ್ಚರ್ಪೆ ಕಸದ ರಾಶಿಯಿಂದ ರಸ ಸಿಗುತ್ತಿದೆ, ಕಲ್ಚರ್ಪೆ ಈಗ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದೆ ಎಂದು ಕಲ್ಚರ್ಪೆ ಹೋರಾಟ ಸಮಿತಿ ನಗರ ಪಂಚಾಯತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿದರು. ಕಳೆದ ಕೆಲವು ವರ್ಷಗಳಿಂದ ಪೆರಾಜೆಯ ಕಲ್ಚರ್ಪೆ ಎಂಬಲ್ಲಿ ನಗರ ಪಂಚಾಯತ್ ಕಸವನ್ನು ಹಾಕಲಾಗುತ್ತಿದೆ. ಈ ಕಾರಣಕ್ಕೆ ಅಲ್ಲಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಅನ್ನುವ ದೂರುಗಳು ಕೂಡ ಕೇಳಿ ಬಂದಿವೆ.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಸದಸ್ಯರಾದ ಶಿಲ್ಪಾ ಸುದೇವ್, ಶೀಲಾ ಅರುಣ್ , ಸುಧಾಕರ ಕುರುಂಜಿ, ಸುಶೀಲ ಜಿನ್ನಪ್ಪ , ಕಿಶೋರಿ ಶೇಟ್ ಉಪಸ್ಥಿತರಿದ್ದರು.