ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಲರಾ ಸೋಂಕು ಹರಡಿದೆ. ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ ಸೋಂಕು ಪತ್ತೆಯಾಗಿದ್ದರೆ ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್ ನಿಂದ ಸೋಂಕು ಸಾಮೂಹಿಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ತಿಳಿಸಿದ್ದಾರೆ.
ಸದ್ಯ ಈ ಕುರಿತಂತೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಡಿದೆ. ಇದೀಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಹೋಟೆಲ್ ಮಾಲೀಕರನ್ನು ಸಭೆಗೆ ಆಹ್ವಾನಿಸಿ ಮಾಹಿತಿ ನೀಡಿದ್ದೇವೆ ಎಂದು ಡಾ| ತಿಮ್ಮಯ್ಯ ತಿಳಿಸಿದ್ದಾರೆ. ಕಲುಷಿತ ಆಹಾರ, ಹಳಸಿದ ಆಹಾರವನ್ನ ಗ್ರಾಹಕರಿಗೆ ನೀಡಬಾರದು. ಪ್ರಮುಖವಾಗಿ ತರಕಾರಿ, ಹಣ್ಣು ಹಂಪಲು ಗುಣಮಟ್ಟವನ್ನ ಕಾಪಾಡಬೇಕು. ಗ್ರಾಹಕರಿಗೆ ನೀಡುವ ಪಾತ್ರೆ ಪ್ಲೇಟ್ಗಳನ್ನ ಬಿಸಿ ನೀರಿನಲ್ಲಿ ತೊಳೆಯಬೇಕು ಎಂದು ಸೂಚಿಸಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಶುದ್ಧ ನೀರು ಬಳಸಬೇಕು ಹಾಗೂ ಬೇಯಿಸಿದ ಆಹಾರವನ್ನ ಬಳಕೆ ಮಾಡುವುದನ್ನ ಕಡಿಮೆ ಮಾಡಬೇಕು. ಆಹಾರ ಸ್ವಲ್ಪ ಕಲುಷಿತವಾದರೂ ಕಾಲರಾ ಅಪಾಯವಿದೆ. ಪಂಚಾಯತ್ ರಾಜ್ ವ್ಯಾಪ್ತಿಯ ನೀರಿನ ತೊಟ್ಟಿಗಳ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕ್ಲೋರಿನೇಷನ್ ಹಾಗೂ ಸೂಪರ್ ಕ್ಲೋರಿನೇಷನ್ ಮಾಡಬೇಕು. ಕಲುಷಿತ ಆಹಾರ ಸೇವನೆ ಮಾಡುವುದರಿಂದ ಕಾಲರಾ ಸೋಂಕು ಹರಡಲಿದ್ದು, ತೀವ್ರ ವಾಂತಿ ಭೇದಿಯಾಗಿ ವ್ಯಕ್ತಿ ಸಾವನ್ನಪ್ಪುವ ಆತಂಕ ಇದೆ ಎಂದರು.