ನ್ಯೂಸ್ ನಾಟೌಟ್: ರಾತ್ರೋರಾತ್ರಿ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ಘಟನೆ ಹುಬ್ಬಳ್ಳಿಯ ಜಿಲ್ಲೆಯ ಮಂಟೂರು ರಸ್ತೆಯ ಸತ್ಯಹರಿಶ್ಚಂದ್ರ ಕಾಲೋನಿಯಲ್ಲಿ ನಡೆದಿದೆ.
ಇಂದಿರಾ ಕ್ಯಾಂಟೀನ್ ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಆರಂಭಿಸಿರುವ ಯೋಜನೆಯಾಗಿದೆ. ಯೋಜನೆ ಆರಂಭದಿಂದಲೂ ಈ ಯೋಜನೆ ಒಂದಿಲ್ಲಾ ಒಂದು ವಿವಾದಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ ಸತ್ಯಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೆ ನಂಬರ್ 212ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದೂಗಳ ರುದ್ರಭೂಮಿಯಿದೆ. ಸ್ಮಶಾನದ ಕಾಂಪೌಂಡ್ ಗೋಡೆ ಒಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ.
ಕಾಮಗಾರಿ ಸ್ಥಳಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಮಾತನಾಡಿ, ಅಬ್ಬಯ್ಯ ಅವರು ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವತ್ತು ಇಂದಿರಾ ಕ್ಯಾಂಟೀನ್, ನಾಳೆ ಅಬ್ಬಯ್ಯ ಕ್ಯಾಂಟೀನ್ ಕಟ್ಟುತ್ತಾರೆ. ಹಿಂದೂ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಡ. ಕೂಡಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.