ನ್ಯೂಸ್ ನಾಟೌಟ್: ಈದ್ ಮಿಲಾದ್ ಮುನ್ನಾದಿನ ಕರಾವಳಿಯ ಮಂಗಳೂರಿನ ಎರಡು ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ ಮತ್ತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಪಟ್ಟಣ ಮತ್ತು ಬಿ.ಸಿ.ರೋಡ್ನಲ್ಲಿ ಇಂದು(ಸೆ.16) ಸೋಮವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪ್ರಚೋದನಕಾರಿ ಭಾಷಣ ಮಾಡಿದ ಕಾರಣ ಈ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಹಿಂದು ಸಂಘಟನೆಗಳು ಇಂದು ಬಿ ಸಿರೋಡ್ ನಲ್ಲಿ ಜಾಥ ಹಮ್ಮಿಕೊಂಡಿದ್ದವು, ಇದೇ ವೇಳೆ ಮುಸ್ಲಿಂ ಯುವಕರು ಬೈಕ್ ರ್ಯಾಲಿ ಮಾಡಿದ್ದು ಘರ್ಷಣೆಗೆ ಕಾರಣವಾಗಿತ್ತು. ಈ ಹಿಂದೆ ಗಣೇಶ ಮೆರವಣಿಗೆಯಲ್ಲಿ ಮಂಡ್ಯದಲ್ಲಿ ನಡೆದ ಕೋಮು ಘರ್ಷಣೆಯ ಬಳಿಕ ಮಂಗಳೂರು ಬೂದಿ ಮುಚ್ಚಿದ ಕೆಂಡದಂತಿತ್ತು.
ಪೊಲೀಸರ ಕ್ಷಿಪ್ರ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಎರಡು ಗುಂಪುಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಹೇಳಿಕೆಗಳು ನಡೆದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.
ಇದರ ಬೆನ್ನಲ್ಲೇ ಬಂಟ್ವಾಳದ ಪೂರ್ವ ಭಾಗದ ಉಪ್ಪಿನಂಗಡಿ ಮತ್ತು ಪಶ್ಚಿಮ ಭಾಗದಲ್ಲಿ ಪಾಣೆಮಂಗಳೂರು ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
Click