ನ್ಯೂಸ್ ನಾಟೌಟ್: ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪಿಎಸ್ಐ ಸೇರಿ ನಾಲ್ವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್ಟೇಬಲ್ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ್ ಎಂಬವರನ್ನು ಅಮಾನತ್ತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಸಾರ ಆದೇಶ ಹೊರಡಿಸಿದ್ದಾರೆ.
ಆ.9ರಂದು ಕದಿರೇನಹಳ್ಳಿಯ ಸಿಮೆಂಟ್ ರಸ್ತೆಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಐದಾರು ಮಂದಿಯನ್ನು ಅಮಾನತ್ತುಗೊಂಡ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಅಪರಿಚಿತರ ಮಾಹಿತಿ ಆಧರಿಸಿ ಠಾಣೆಗೆ ಕರೆದೊಯ್ದಿದ್ದರು. ಆರೋಪಿತರ ದ್ವಿಚಕ್ರ ವಾಹನದಲ್ಲಿದ್ದ 400ಕ್ಕೂ ಅಧಿಕ ಗ್ರಾಂ ತೂಕದ ಅಫೀಮು ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಐದಾರು ಮಂದಿ ಪೈಕಿ ಇಬ್ಬರು ಯುವಕರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಅದರಿಂದ ಆತಂಕಗೊಂಡ ಬಂಧಿತ ಯುವಕರ ಕುಟುಂಬ ಸದಸ್ಯರು, ಬಾತ್ಮೀದಾರ ರಾಜನ್ ಎಂಬಾತನ ಕೈವಾಡವಿದೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರು ಮತ್ತು ದಕ್ಷಿಣ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. ಈ ಸಂಬಂಧ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಗಿರೀಶ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆಗ ಬಂಧಿತ ಇಬ್ಬರು ಯುವಕರು ಅಮಾಯಕರಾಗಿದ್ದು, ಉದ್ದೇಶ ಪೂರ್ವಕವಾಗಿ ಬಂಧಿಸಲಾಗಿದೆ ಎಂಬ ವಿಷಯ ಬಯಲಾಗಿದೆ. ತನಿಖಾ ವರದಿ ಆಧರಿಸಿ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿದಲ್ಲದೆ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದಡಿ ಅಮಾನತ್ತುಗೊಳಿಸಲಾಗಿದೆ.
Click