ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಪರಿಸರದಲ್ಲಿ ಹೆಚ್ಚಿನ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ತಿಂಗಳುಗಳ ಹಿಂದೆ ತಾಲೂಕು ಪಂಚಾಯತ್ ಅನುದಾನದಿಂದ ಅಳವಡಿಸಲಾಗಿದ್ದ ಸೋಲಾರ್ ಬೀದಿ ದೀಪಗಳು ರಾತ್ರೋ ರಾತ್ರಿ ಇದೀಗ ಕಳ್ಳರ ಪಾಲಾಗಿರುವ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಮೂರು ಸೋಲಾರ್ ಪ್ಯಾನಲ್ ಸಮೇತ ಕಳ್ಳರು ಲೈಟ್ ಅನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾಜೆ ಗ್ರಾಮದ ಗೂನಡ್ಕ ಶಾಲಾ ಬಳಿ ಹಾಗೂ ವರದಾರಾಜ್ ಮನೆಗೆ ತಿರುಗುವಲ್ಲಿ ಪೆರುಂಗೋಡಿ ಬಳಿ ಸೋಲಾರ್ ಬೀದಿ ದೀಪ ಅಳವಡಿಸಲಾಗಿತ್ತು. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಜೀಪಿನಲ್ಲಿ ಬಂದಿರುವ ಕಳ್ಳರು ಅದನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ. ತಾಲೂಕು ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ದೂರು ದಾಖಲಾಗುವ ನಿರೀಕ್ಷೆ ಇದೆ.