ನ್ಯೂಸ್ ನಾಟೌಟ್ : ಕೆಲಸಕ್ಕೆಂದು ಕುವೈಟ್ ಗೆ ತೆರಳಿದ್ದ ಆಂಧ್ರಪ್ರದೇಶದ ಮಹಿಳೆಯೊಬ್ಬಳನ್ನು ಉದ್ಯೋಗ ನೀಡಿದ ವ್ಯಕ್ತಿ ಆಕೆಯನ್ನು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ವಿಡಿಯೋ ಮಾಡಿದ್ದಾಳೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕವಿತಾ ಎಂಬಾಕೆ, ಆಂಧ್ರಪ್ರದೇಶ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರಲ್ಲಿ ನನ್ನನ್ನು ಈ ಕಿರುಕುಳದಿಂದ ರಕ್ಷಿಸಿ…ದಯವಿಟ್ಟು ನನ್ನ ರಕ್ಷಿಸಿ ಸರ್ ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
“ನನಗೆ ಇಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ನನಗೆ ಇಬ್ಬರು ಮಕ್ಕಳು, ವಿಕಲಚೇತನ ಪತಿ ಊರಲ್ಲಿದ್ದಾರೆ. ಇವರನ್ನು ಸಾಕುವ ಹೊಣೆಯಿಂದ ಕುವೈಟ್ ಗೆ ಕೆಲಸಕ್ಕಾಗಿ ಬಂದಿದ್ದು, ನನಗಿಲ್ಲಿ ದಾರಿ ಕಾಣದಂತಾಗಿದೆ” ಎಂದು ವಿಡಿಯೋದಲ್ಲಿ ಬೇಡಿಕೊಂಡಿದ್ದಾರೆ.
ಕುವೈಟ್ ನಲ್ಲಿ ಉದ್ಯೋಗ ನೀಡಿದ ವ್ಯಕ್ತಿ ಕವಿತಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದು, ಊಟೋಪಚಾರವನ್ನೂ ನೀಡುತ್ತಿಲ್ಲ. ತನ್ನನ್ನು ಆತ ಗೃಹಬಂಧನದಲ್ಲಿ ಇಟ್ಟಿರುವುದಾಗಿ ಕವಿತಾ ದೂರಿದ್ದು, ಆಕೆಯ ಟ್ರಾವೆಲ್ ಏಜೆಂಟ್, ಆಕೆಗೆ ಬೆದರಿಕೆಯೊಡ್ಡಿ, ಫೋನ್ ಅನ್ನು ಬ್ಲಾಕ್ ಮಾಡಿ ಕುಟುಂಬಸ್ಥರು ಸೇರಿದಂತೆ ಯಾರ ಜತೆಗೂ ಮಾತನಾಡದಂತೆ ನಿರ್ಬಂಧಿಸಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.