ನ್ಯೂಸ್ ನಾಟೌಟ್: ಜೆಸಿಐ ಸುಳ್ಯ ಸಿಟಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲ್ ಸಂಯುಕ್ತಾಶ್ರಯದಲ್ಲಿ ಸೆ.12ರಂದು ಕಾಲೇಜಿನ ಸ. ಪ್ರ. ದರ್ಜೆ ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ನೆಟ್ ಕಾಂ ಸ್ಥಾಪಕ ಹಾಗೂ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಹಾಗೂ ನ್ಯೂಸ್ ನಾಟೌಟ್ ಚಾನೆಲ್ ನ ಪ್ರಧಾನ ಸಂಪಾದಕರಾದ ಹೇಮಂತ್ ಸಂಪಾಜೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ವಹಿಸಿದ್ದರು. ಡಿಜಿಟಲ್ ಯುಗದ ಉದ್ಯೋಗಾವಕಾಶ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹೇಮಂತ್ ಸಂಪಾಜೆಯವರು, ‘ಡಿಜಿಟಲ್ ಯುಗ ಇಂದು ಅತ್ಯಂತ ವೇಗವಾಗಿ ಮಾಹಿತಿಯನ್ನು ಒಬ್ಬರಿಂದ ಒಬ್ಬರಿಗೆ ತಲುಪಿಸಲು ಸಹಾಯ ಮಾಡುತ್ತಿದೆ. ಈ ಕ್ಷಣದಲ್ಲಿ ಆದ ಘಟನೆಯನ್ನು ಕೆಲವೇ ನಿಮಿಷಗಳಲ್ಲಿ ವರದಿಯಾಗಿ ಜನರಿಗೆ ತಲುಪಿಸುತ್ತಿದೆ. ಅದೆಷ್ಟೋ ಮಂದಿ ಇಂದು ಸಾಮಾಜಿಕ ಜಾಲತಾಣಗಳಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಡಿಜಿಟಲ್ ಯುಗದಿಂದಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಅದೆಲ್ಲದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ ಓದುವಾಗಲೇ ದುಡಿಮೆಯ ಜೀವನವನ್ನೂ ಕಾಣಬಹುದು. ನಿಮ್ಮಲ್ಲಿ ಪ್ರತಿಭೆ ಇದ್ದರೆ ಇದೆಲ್ಲವೂ ಸಾಧ್ಯ ಅನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಇದೇ ವೇಳೆ ಮಾತನಾಡಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸುಧಾಕರ ರೈ ಅವರು ‘ ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿಮೆಯನ್ನು ಕಾಣಲು ಇಂದು ಹಲವಾರು ದಾರಿಗಳಿವೆ. ತಂತ್ರಜ್ಞಾನ ಎಲ್ಲವನ್ನೂ ಸುಲಭವಾಗಿಸಿ ಕೊಟ್ಟಿದೆ. ಮನಸ್ಸು ಮಾಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ. ನಾನು ವಿದೇಶದಲ್ಲಿದ್ದ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಸುಳ್ಯದಲ್ಲಿ ನೆಟ್ ಕಾಂ ಸಂಸ್ಥೆ ಸ್ಥಾಪಿಸಿ ಅದರಲ್ಲಿ ಯಶಸ್ವಿಯಾದೆ. ಅಂದು ಧೈರ್ಯ ಮಾಡಿದ್ದಕ್ಕೆ ಇದು ಸಾಧ್ಯವಾಯಿತು. ನೀವೂ ಕೂಡ ಭವಿಷ್ಯದ ದಾರಿಯನ್ನು ಈಗಿನಿಂದಲೇ ಕಂಡುಕೊಳ್ಳಲು ಅಭ್ಯಾಸ ಮಾಡಿ’ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲ್ ಪ್ರಾಧ್ಯಾಪಕಿ ಹಾಗೂ ಐಕ್ಯುಎಸಿ ಸಂಚಾಲಕಿ ಡಾ. ಜಯಶ್ರೀ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ ಬೈಲ್ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿ (ಯುನಿಟ್ ೩)ರಾಮಕೃಷ್ಣ ಕೆ.ಎಸ್, ಪ್ರಾಧ್ಯಾಪಕಿ ಡಾ. ಲತಾ, ಜೆಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷ ಬಶೀರ್ ಯುಪಿ, ಜೆಸಿಐ ಸುಳ್ಯ ಸಿಟಿ ಸಪ್ತಾಹ ನಿರ್ದೇಶಕಿ ಅನಿತಾ ಪಾನತ್ತಿಲ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.