ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ವಾದವನ್ನು ಪುರಸ್ಕರಿಸಿ ನ್ಯಾಯಾಲಯ ಆದೇಶ ನೀಡಿದೆ.
ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸೆಪ್ಟೆಂಬರ್ 1 ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ನಂಬಿಕೆ ದ್ರೋಹ ದೂರು ದಾಖಲಿಸಿದ್ದರು. ಮಹಿಳಾ ಠಾಣೆಯಲ್ಲಿ ಅದೇ ದಿನ ಎಫ್ಐಆರ್ ದಾಖಲಾಗಿದ್ದು, ಪುತ್ತೂರು ನಗರ ಠಾಣೆ ಇನ್ಸ್ಪೆಕ್ಟರ್ ತನಿಖಾಧಿಕಾರಿಯಾಗಿ ತನಿಖೆ ಆರಂಭಿಸಿದ್ದರು.
ಸೆಪ್ಟೆಂಬರ್ 2 ರಂದು ಪುತ್ತೂರು ನ್ಯಾಯಾಲಯಕ್ಕೆ ನ್ಯಾಯವಾದಿ ನರಸಿಂಹ ಪ್ರಸಾದ್ ಮೂಲಕ ಹಾಜರಾದ ಪುತ್ತಿಲ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಪುತ್ತಿಲ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಅದೇ ದಿನ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಸಂತ್ರಸ್ತ ಮಹಿಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾತ್ರ ನಡೆದಿದ್ದಲ್ಲ, ಅತ್ಯಾಚಾರ ಕೂಡ ನಡೆದಿದೆ ಎಂದು ಹೇಳಿದ್ದರು. ಈ ಹೇಳಿಕೆ ದಾಖಲಾದ ಬಳಿಕ ಪುತ್ತಿಲ ವಿರುದ್ಧದ ಎಫ್ಐಆರ್ ನಲ್ಲಿ ಐಪಿಸಿ-376 ಕಲಂ ಪ್ರಕಾರ ಅತ್ಯಾಚಾರ ಪ್ರಕರಣ ಸೇರ್ಪಡೆಯಾಗಿತ್ತು.
ಎಫ್ಐಆರ್ ನಲ್ಲಿ ದಾಖಲಾದ ಐಪಿಸಿ-354 (ಎ) ಕಲಂ ಅಡಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಅರುಣ್ ಕುಮಾರ್ ಪುತ್ತಿಲ ಜಾಮೀನು ಪಡೆದುಕೊಂಡಿದ್ದರೂ, ಐಪಿಸಿ ಕಲಂ-376 (ಅತ್ಯಾಚಾರ) ಸೇರ್ಪಡೆಯಾದ ಕಾರಣ ಅದಕ್ಕೆ ಹೊಸದಾಗಿ ಜಾಮೀನು ಪಡೆಯಬೇಕಾದ ಅಥವಾ ಮೇಲಿನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಅನಿವಾರ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದರು. ಪ್ರಸ್ತುತ ಪುತ್ತಿಲ ಪ್ರಕರಣದ ರದ್ದತಿ ಕೋರಿದ್ದಾರೆ ಎನ್ನಲಾಗಿದೆ.
Click