ನ್ಯೂಸ್ ನಾಟೌಟ್: ಬೆಣ್ಣೆಯಿಂದ ಕೂದಲು ತೆಗೆದಂತೆ, ಕೆಲವೊಮ್ಮ ಅರಳು ಹುರಿದಂತೆ ಕಣ್ಣು ಮುಚ್ಚಿ ಅತಿ ಬುದ್ಧಿವಂತಿಕೆಯಿಂದ ಮಾತನಾಡುವ ಅವಧೂತ ವಿನಯ್ ಗುರೂಜಿ ವಿರುದ್ಧ ಇದೀಗ ಹಣ ಕೊಳ್ಳೆ ಹೊಡೆದವರ ಪರ ಬ್ಯಾಟಿಂಗ್ ಮಾಡಿರುವಂತಹ ಗಂಭೀರ ಆರೋಪಗಳು ಕೇಳಿ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದ್ದು ಬಾರಿ ಕುತೂಹಲಕ್ಕೆ ಕಾರಣವಾಗಿದೆ.
ವಿನಯ್ ಗುರೂಜಿ ಅತ್ಯಂತ ಚತುರ ಮಾತುಗಾರ. ಮಾತಿನಲ್ಲೇ ಮೋಡಿ ಮಾಡಬಲ್ಲ ಮಾಯಾಗಾರ. ಅಂತಹ ವಿನಯ್ ಗುರೂಜಿ ಒಂದೂವರೆ ತೆಂಗಿನ ಕಾಯಿಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೈಗಿಟ್ಟು ತನಗೆ ಬೇಕಾದವರನ್ನು ಅಧಿಕ ಆದಾಯ ಬರುವ ಕರ್ನಾಟಕದ ಎಲ್ಲ ಎ ಗ್ರೇಡ್ ದೇವಸ್ಥಾನಗಳಲ್ಲಿ ಟ್ರಸ್ಟಿಯಾಗಿ ಮಾಡಿಕೊಂಡಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ದೇವಸ್ಥಾನದ ಸಿಆರ್ ಎಸ್ ಫಂಡ್ ಗಳನ್ನು ಅವಧೂತ ಟ್ರಸ್ಟ್ ಗೆ ವರ್ಗಾಯಿಸುವುದಕ್ಕೆ ವ್ಯಾಪಕ ಷಡ್ಯಂತ್ರವೇ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ. ಈ ಕುರಿತ ಫೇಸ್ ಬುಕ್ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಶಿವಮೊಗ್ಗದ ತೀರ್ಥ ಹಳ್ಳಿಯಲ್ಲಿ ನಾಲ್ಕು ಜನರಿಗೆ ಪರಿಚಯ ಇಲ್ಲದ ಶ್ರೀವತ್ಸ ಎನ್ನುವ ಅನಾಮಿಕ ವ್ಯಕ್ತಿಯನ್ನು ಅವಧೂತ ವಿನಯ್ ಗುರೂಜಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟ್ರಸ್ಟಿ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀವತ್ಸ ಅನ್ನುವ ವ್ಯಕ್ತಿ ಕಾಂಗ್ರೆಸ್ ಜತೆಗೆ ಒಡನಾಟ ಇರುವವ ಎನ್ನಲಾಗುತ್ತಿದೆ. ಸದ್ಯ ಆತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದಾನೆ ಎನ್ನಲಾಗಿದೆ. ದಕ್ಷಿಣ ಕನ್ನಡ, ಮಲೆನಾಡಿನ ರಾಜಕೀಯ ನಾಯಕರು ವಿನಯ್ ಹೇಳಿದಂತೆ ಕುಣಿಯುತ್ತಿದ್ದು ಅವರಿಗೆ ಸಕಲ ರೀತಿಯಲ್ಲೂ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ವಿನಯ್ ಗುರೂಜಿ ಒತ್ತಡಕ್ಕೆ ಶ್ರೀ ವತ್ಸ ನನ್ನು ಪಟ್ಟು ಹಿಡಿದು ಟ್ರಸ್ಟಿ ಮಾಡಿಸಿದ ಆಗಿನ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಈ ವಿಚಾರದಲ್ಲಿ ಮೌನ ತಾಳಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ವಿನಯ್ ಗುರೂಜಿಯರು ಕುಕ್ಕೆಯಂತಹ ಪವಿತ್ರ ಕ್ಷೇತ್ರದಲ್ಲಿ ಅಧರ್ಮಿಗಳ ಜೊತೆ ನಿಂತಿರುವ ಗುಮಾನಿ ನಿಜವಾದರೆ ರಾಜಕೀಯವಾಗಿ, ಸಾಮಾಜಿಕವಾಗಿ ಭವಿಷ್ಯ ನುಡಿಯುವ ಅವದೂತರ ಭವಿಷ್ಯಕ್ಕೆ ಕೆಟ್ಟದಾದ ಪರಿಣಾಮ ಉಂಟು ಮಾಡಬಹುದು. ಹಾಗಾಗದಿರಲಿ ಅನ್ನುವುದೇ ಗುರೂಜಿ ಅಭಿಮಾನಿಗಳ ಆಶಯವಾಗಿದೆ.
==