ನ್ಯೂಸ್ ನಾಟೌಟ್: ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಅನ್ನುವ ಮಾತಿದೆ. ಮನೆಯಲ್ಲಿ ಸಾಮಾನ್ಯ ಜ್ಞಾನಕೊಟ್ಟು ಬೆಳೆಸುವ ಪೋಷಕರು, ವಿದ್ಯೆ ಕಲಿಸಿ ಕೈ ಹಿಡಿಯುವ ಸರ್ವಶ್ರೇಷ್ಠ ಗುರುವಿದ್ದರೆ ಬದುಕಿನಲ್ಲಿ ವಿದ್ಯಾರ್ಥಿಗಳು ಏನು ಬೇಕಾದರೂ ಸಾಧನೆ ಮಾಡಬಹುದು. ಈ ಮಾತಿಗೆ ಗೂನಡ್ಕದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಪ್ರತ್ಯಕ್ಷ ಉದಾಹರಣೆಯಾಗಿ ನೆಮ್ಮಲ್ಲರ ಎದುರು ನಿಂತಿದ್ದಾರೆ.
ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ತಮಗೆ ಕನ್ನಡ ಕಲಿಸಿ ಬದುಕಿನ ದಿಕ್ಕನ್ನು ಬದಲಾಯಿಸಿ ಓರ್ವ ಕನ್ನಡ ಪ್ರೇಮಿಯಾಗಿ ರೂಪಿಸಿದ ನೆಚ್ಚಿನ ಗುರು ಡಾ. ಪೂವಪ್ಪ ಕಣಿಯೂರು ಅವರನ್ನು ಡಾ. ಉಮ್ಮರ್ ಬೀಜದಕಟ್ಟೆ ಬೆಂಗಳೂರಿನಲ್ಲಿ ಸನ್ಮಾನಿಸಿದರು. ಶಿಕ್ಷಕರ ದಿನವೇ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಿದರು. ಫಾರ್ಚ್ಯೂನ್ ಟ್ರಿನಿಟಿ ಹೋಟೆಲ್ ನಲ್ಲಿ ನಡೆದ ಸರಳ ಅದ್ದೂರಿ ಕಾರ್ಯಕ್ರಮವು ಆ ದಿನಗಳ ಸವಿಸವಿ ನೆನಪುಗಳ ಮೆಲುಕು ಹಾಕುವಂತೆ ಮಾಡಿತು. ಈ ವೇಳೆ ಮಾತನಾಡಿದ ಡಾ. ಉಮ್ಮರ್ ಬೀಜದಕಟ್ಟೆ ಅವರು, “ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ನನಗೆ ಎಲ್ಲವನ್ನು ನೀಡಿದೆ. ಡಾ. ಪೂವಪ್ಪ ಕಣಿಯೂರು ಕನ್ನಡ ಪಾಠ ನನಗೆ ತುಂಬಾ ಖುಷಿ ನೀಡುತ್ತಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಕನ್ನಡಾಭಿಮಾನಕ್ಕೆ ಕಣಿಯೂರು ಸರ್ ಸ್ಫೂರ್ತಿಯಾದ್ರು. ಅವರ ಕನ್ನಡ ಪಾಠಗಳನ್ನು ಕೇಳುತ್ತಾ ನಾನು ಕನ್ನಡ ಪ್ರೇಮಿಯಾಗಿ ರೂಪುಗೊಂಡೆ, ಈ ಮಾರ್ಗದರ್ಶನದಿಂದಲೇ ಇಂದು ಸಜ್ಜನದ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದಕ್ಕೆ ಸಾಧ್ಯವಾಯಿತು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಇಸಾಕ್ ಹಾಗೂ ರವಿಕುಮಾರ್ ಅವರು ಡಾ. ಪೂವಪ್ಪ ಕಣಿಯೂರು ಮತ್ತು ಅವರ ಧರ್ಮಪತ್ನಿ ಸರೋಜ, ಕಿರಿಯ ಮಗ ವಿದ್ವತ್ ಕಣಿಯೂರು ಒಡ ಗೂಡಿದಂತೆ ಸನ್ಮಾನಿಸಿದರು. ಮಂಜುನಾಥ ಹಿರಿಯೂರು ಮತ್ತು ಪ್ರಕಾಶ್ ರವರು ಸಂಯೋಜಿಸಿದರು. ಅರವಿಂದ್ ರವರು ಸ್ವಾಗತಿಸಿದರು. ರವಿಕುಮಾರ್ ವಂದನಾರ್ಪಣೆ ಮಾಡಿದರು. ಮಾನವ ಸಂಪನ್ಮೂಲ, ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಆರಿಸ್ ಪೇರಡ್ಕ, ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳಾದ ಕೃಷ್ಣಮೂರ್ತಿ, ಕಾರ್ತಿಕ್, ಚೆಲುವರಾಜು, ಶಂಕರ್ ದಿಸಾಲೆ, ಪವನ್ ಕುಮಾರ್, ರಾಧಾಕೃಷ್ಣ, ಶ್ರೀನಿವಾಸ್, ರಕ್ಷಿತ್, ಉನ್ನಿಸ್ ಗೂನಡ್ಕ, ಯತೀಶ್ ಟಿ ಡಿ ಮತ್ತಿತರರು ಪಾಲ್ಗೊಂಡಿದ್ದರು.