ನ್ಯೂಸ್ ನಾಟೌಟ್: ‘ಗೃಹಲಕ್ಷ್ಮಿ’ ಯೋಜನೆ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿ, ಅದರ ಸದುಪಯೋಗ ಪಡೆದುಕೊಂಡ ಮಹಿಳೆಯರು ಆ ಕಾರ್ಯಕ್ರಮದಲ್ಲಿ ರೀಲ್ಸ್ ಮಾಡುವ ಮೂಲಕ ಭಾಗವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದು ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆ ತಂದಿದೆ ಎಂಬುದನ್ನು ಯಜಮಾನಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳ ಮೂಲಕ ಹಂಚಿಕೊಳ್ಳಿ. ಯಾವ ರೀಲ್ಸ್ ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಹ ರೀಲ್ಸ್ ಗಳಿಗೆ ವೈಯಕ್ತಿಕವಾಗಿ ಬಹುಮಾನ ನೀಡಲಾಗುವುದು ಎಂದು ಸಚಿವೆ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಪೋಸ್ಟ್ ಹಂಚಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , “ರಾಜ್ಯದ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಮನೆಯೊಡತಿಯರಿಗೆ/ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ” ಎಂದು ಹೇಳಿದ್ದಾರೆ.
“ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ (ಸೆಪ್ಟಂಬರ್ 30) ರೀಲ್ಸ್ ಮೂಲಕ ಸೋಶಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ಯಾವ ರೀಲ್ಸ್ ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಹ ರೀಲ್ಸ್ ಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಾಗುವುದು” ಎಂದು ತಿಳಿಸಿದ್ದಾರೆ.