ಸಂಪಾಜೆ: ಹಿರಿಯ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರಿಗೆ ಅಳಿಕೆ ಯಕ್ಷ ಸಹಾಯ ನಿಧಿಯನ್ನು ಮಂಗಳವಾರ ಸಂಪಾಜೆಯ ಸುಳ್ಯಕ್ಕೋಡಿ ನಿವಾಸದಲ್ಲಿ ನೀಡಿ ಗೌರವಿಸಲಾಯಿತು.
ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಬೆಂಗಳೂರು ಇವರು ನೀಡುವ ಸಹಾಯ ನಿಧಿಯು 20 ಸಾವಿರ ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ನಗದು ಸ್ಮರಣಿಕೆಯನ್ನು ಜಯಾನಂದ ಸಂಪಾಜೆ ಕುಟುಂಬಕ್ಕೆ ಯಕ್ಷಗಾನ ವಿದ್ವಾಂಸ ಡಾ ಎಂ ಪ್ರಭಾಕರ ಜೋಶಿ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು. ಅಳಿಕೆ ರಾಮಯ್ಯ ರೈಯವರಂತಹ ಪ್ರಸಿದ್ಧ ಕಲಾವಿದರು ಯಕ್ಷಗಾನಕ್ಕೆ ಘನತೆ ತಂದುಕೊಟ್ಟ ಹಿರಿಯರು. ಅವರಂತೆ ಕಲೆಗಾಗಿ ಬದುಕು ತೇದ ಅನೇಕರು ಇಂದು ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ. ಅವರ ಬದುಕು – ಸಾಧನೆ ಕಿರಿಯ ಕಲಾವಿದರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಪ್ರೊ.ಭಾಸ್ಕರ್ ರೈ ಕುಕ್ಕುವಳ್ಳಿ ,ಉಮೇಶ್ ಶೆಟ್ಟಿ ಉಬರಡ್ಕ, ಅಳಿಕೆ ದುರ್ಗಾ ಪ್ರಸಾದ್ ರೈ, ಮಹಾಬಲ ರೈ , ಜಗದೀಶ್ ರೈ, ಕುಶಾಲಪ್ಪ, ಕೇಶವ ಬಂಗ್ಲೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.