ನ್ಯೂಸ್ ನಾಟೌಟ್: ಉಡುಪಿ ಬೀಚ್ನಲ್ಲಿ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸುತ್ತಿದ್ದ ಯುವತಿಯೊಬ್ಬಳು ಅದನ್ನು ತಡೆಯಲು ಬಂದ ಪೊಲೀಸರ ವಿರುದ್ಧ ಗರಂ ಆಗಿದ್ದಾಳೆ. ಹೌದು. ಉಡುಪಿಯ ಪಡುಕೆರೆ ಬೀಚ್ನಲ್ಲಿ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸುತ್ತಿದ್ದ ವೇಳೆ ಮಲ್ಪೆ ಪೊಲೀಸರು ಯುವತಿಯನ್ನ ತಡೆಯಲು ಮುಂದಾಗಿದ್ದಾರೆ. ಇದರಿಂದ ಅಸಮಾಧಾನಗೊಂಡ ಯುವತಿ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಫೋಟೋ-ವೀಡಿಯೊವೊಂದನ್ನು ಅಪ್ಲೋಡ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಉಡುಪಿ ಬೀಚ್ನಲ್ಲಿ (Udupi Beach) ನಮಗೆ ಕಹಿ ಅನುಭವ ಆಯಿತು. ನಾವು ಫೋಟೋ ಶೂಟ್ ಮಾಡಿಸುತ್ತಿದ್ದೆವು. ಆದ್ರೆ ಅಲ್ಲಿನ ಪೊಲೀಸರು ಬಟ್ಟೆ ಬದಲಿಸುವಂತೆ ಸೂಚಿಸಿದರು. ಏಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ದುರ್ವರ್ತನೆ ತೋರಿದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ ಎಂದು ತಾಕೀತು ಮಾಡಿದರು. ನೈತಿಕ ಪೊಲೀಸ್ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶ, ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಪೊಲೀಸರನ್ನು ಯುವತಿ ಪ್ರಶ್ನೆ ಮಾಡಿದ್ದಾಳೆ. ಆದರೂ ಯುವತಿಯನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಕಾಮೆಂಟ್ ನಲ್ಲಿ ಆಕೆಯನ್ನು ತಡೆದ ಪೊಲೀಸರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಹಾರಾಷ್ಟ್ರ ಮೂಲದ ಮಾಡೆಲ್ ಖ್ಯಾತಿಶ್ರೀ ಪಡುಕೆರೆ ಬೀಚ್ನಲ್ಲಿ ಎದೆ ಸೀಳು ಕಾಣಿಸುವಂತೆ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ಪಡುಕೆರೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಮಲ್ಪೆ ಪೊಲೀಸರು ಬಟ್ಟೆ ಬದಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ವೀಡಿಯೋ ಸಮೇತ ಹಂಚಿಕೊಂಡಿದ್ದಾರೆ.
Click