ನ್ಯೂಸ್ ನಾಟೌಟ್: ಮಾಲಿವುಡ್ ಸಿನಿಮಾರಂಗದಲ್ಲಿ ಹೇಮಾ ಸಮಿತಿ ವರದಿ ಬಂದ ಬಳಿಕ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಆಂಧ್ರಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ಮುಂಬೈ ನಟಿಯೊಬ್ಬರು ಮಾಡಿರುವ ಲೈಂಗಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ರಾಜಕೀಯ ಹಾಗೂ ಟಾಲಿವುಡ್ ಸಿನಿಮಾರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಗುಜರಾತ್ ಮೂಲದ ನಟಿ ಕಾದಂಬರಿ ಜೇತ್ವಾನಿ ತೆಲುಗಿನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ಲೈವ್ನಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟು, ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಪಕ್ಷದ ನಾಯಕನೊಬ್ಬನ ಮೇಲೆ ಸಾಕ್ಷಿ ಸಮೇತ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಹಣ ಹಾಗೂ ಅಧಿಕಾರದ ದುರ್ಬಳಕೆ ಮಾಡಿಕೊಂಡ ನನ್ನ ಹಾಗೂ ನನ್ನ ಕುಟುಂಬದ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ವಿಜಯವಾಡ ಜಿಪಂ ಮಾಜಿ ಅಧ್ಯಕ್ಷ ಕುಕ್ಕಲ ನಾಗೇಶ್ವರ ರಾವ್ ಅವರ ಮಗ ವೈಎಸ್ಆರ್ಸಿಪಿ ನಾಯಕ ಕುಕ್ಕಲ ವಿದ್ಯಾಸಾಗರ್ (Kukkala Vidya Sagar) ಎಂಬಾತ ಪ್ರತಿದಿನ ನನಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ವಾಟ್ಸಾಪ್ ನಲ್ಲಿ ಕರೆ ಮಾಡಿ ಬೆತ್ತಲೆಯಾಗಿ ನಿಂತು ಸೆಲ್ಫಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಅಂದಿನ ಆಂಧ್ರ ಸರ್ಕಾರದ ಪ್ರಬಲ ನಾಯಕರು, ಉನ್ನತ ಪೊಲೀಸ್ ಅಧಿಕಾರಿಗಳ ಗ್ಯಾಂಗ್ ಹಣ ಹಾಗೂ ಅಧಿಕಾರವನ್ನು ಬಳಸಿಕೊಂಡು ನನಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಂಧ್ರ ಸರ್ಕಾರದ ಆದೇಶದ ಮೇರೆಗೆ ಅದೊಂದು ದಿನ ಮುಂಬೈನಲ್ಲಿನ ನನ್ನ ಮನೆಗೆ ಆಂಧ್ರ ಪೊಲೀಸರು ದಾಳಿ ಮಾಡಿದ್ದರು. ನನ್ನನ್ನು ಅಪಹರಿಸಿ, ನನ್ನ ತಂದೆ – ತಾಯಿಯನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ನೀಡಿದ ಚಿತ್ರಹಿಂಸೆಯಿಂದಾಗಿ ನನ್ನ ತಂದೆಗೆ ಕಿವಿ ಕೇಳಿಸದಂತೆ ಆಯಿತು. ನನ್ನ ತಾಯಿಗೆ ಹೃದಯದ ಸಮಸ್ಯೆಯಾಯಿತು ಎಂದು ಆರೋಪಿಸಿದ್ದಾರೆ.
ಆರು ತಿಂಗಳಿಂದ ಯಾರೊಂದಿಗೂ ಮಾತನಾಡಲಿಲ್ಲ. ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈನಲ್ಲಿ ನನ್ನನ್ನು ಅಪಹರಿಸಿ ವಿಜಯವಾಡಕ್ಕೆ ಕರೆತರಲಾಯಿತು. ನನ್ನ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿ ಆತನ ಅಶ್ಲೀಲ ಫೋಟೋವನ್ನು ತೋರಿಸಿದ್ದಾರೆ.