ನ್ಯೂಸ್ ನಾಟೌಟ್: ಕನ್ನಡ ನಾಡು, ನುಡಿ, ಭಾಷೆಯ ವಿಚಾರ ಬಂದಾಗ ಸಾಮಾಜಿಕ ಬದ್ಧತೆಯೊಂದಿಗೆ ಸ್ವಯಂ ಪ್ರೇರಿತರಾಗಿ ಮುನ್ನುಗ್ಗುವ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಗೂನಡ್ಕ ಇದೀಗ ಯಶಸ್ವಿಯಾಗಿ ಮತ್ತೊಂದು ಕಾರ್ಯಕ್ರಮವನ್ನು ಪೂರೈಸಿದೆ.
ಆಗಸ್ಟ್ 24 ರಂದು ಅರಮನೆ ನಗರಿ ಮೈಸೂರಿನ ಹೋಟೆಲ್ ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. “ಮಾನವ ಸಂಪನ್ಮೂಲ ನಾವೀನ್ಯ ನಾಯಕರು – ಕೌಶಲ್ಯ ಹಾಗೂ ತಂತ್ರಜ್ಞಾನ’ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ಇದರಲ್ಲಿ ರಾಜ್ಯದ ಸುಮಾರು 40ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಡಾ. ಅನಂತ ಗೌಡ ಅವರು ಈ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು. ಸ್ಪರ್ಧಾತ್ಮಕ ಜಗತ್ತಿನ ಈ ದಿನಗಳಲ್ಲಿ ಯುವ ಪೀಳಿಗೆಯು ಕಲಿಕೆಯ ಮುಖಾಂತರ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಕಾರ್ಖಾನೆಗಳಲ್ಲಿ ಅಧ್ಯಯನ ಮಾಡಲು ಅವಕಾಶ ಒದಗಿಸಿ ಕೊಡುವ ಮೂಲಕ ಕೌಶಲ್ಯ ವೃದ್ಧಿ ಮಾಡಲು ಸಹಕರಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು, ಮಾತ್ರವಲ್ಲ ಸಜ್ಜನ ಪ್ರತಿಷ್ಠಾನವು ಈ ಎಂಟು ವರ್ಷಗಳಲ್ಲಿ ಮಾಡಿಕೊಂಡು ಬಂದಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಡಾ. ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಇದೇ ವೇಳೆ ಮಾತನಾಡಿದ ಡಾ. ಉಮ್ಮರ್ ಬೀಜದಕಟ್ಟೆ ಅವರು, “ಯುವ ಸಮೂಹ ಈ ದೇಶದ ಆಸ್ತಿ ಹಾಗಾಗಿ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವುದರ ಮುಖಾಂತರ ದೇಶದ ಅಭಿವೃದ್ಧಿ ಹೆಚ್ಚಿಸಲು ಸಾಧ್ಯ, ಇಂತಹ ತರಬೇತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಆಯೋಜಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು, ಇನ್ನು ಮುಂದೆ ಇತರೆ ಜಿಲ್ಲೆಗಳಲ್ಲೂ ಆಯೋಜಿಸುವ ಇಂಗಿತವಿದೆ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜುಬ್ಲಿಯೆಂಟ್ ಫರ್ಮೋವ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಶ್ರೀ ಸುಬ್ರಹ್ಮಣ್ಯ , ಶ್ರೀ ಅಲಿಯನ್ಸ್ ಮೆಕಾಟ್ರಾನಿಕ್ಸ್ ಪ್ರವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸುದೇಶ್ಕರ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಾದೇಶಿಕ ಕಚೇರಿ ಮೈಸೂರು ವಿಭಾಗದ ಮೇಲ್ವಿಚಾರಕ ಸಂದೀಪ್ ಬಿ ಸಿ, ಮೈಸೂರಿನ ದೇವಾಶ್ಯ ಲಾ ಅಸೋಸಿಯೇಟ್ಸ್ ಇದರ ಅಡ್ವಕೇಟ್ ವಿಶ್ವನಾಥ್ ದೇವಶ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾರ್ಮಡ್ ಲಿಮಿಟೆಡ್ ನ ಖ್ಯಾತ ತರಬೇತುದಾರರು ಹಾಗೂ ತರಬೇತಿ ವಿಭಾಗದ ಸಹಾಯಕ ಉಪಾಧ್ಯಕ್ಷ ವಿಕ್ರಂ ಸಾಗರ್ ಸಕ್ಸೇನಾ ಕಾರ್ಯಾಗಾರದಲ್ಲಿ ತರಬೇತಿ ನೀಡಿದರು. ಕ್ರಸೇಂಟ್ ಕನ್ಸಲ್ಟೆಂಟ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಇಸ್ಮಾಯಿಲ್ ಜರಾ ಸ್ವಾಗತಿಸಿದರು. ಬಿಇಎಂಎಲ್ ಲಿಮಿಟೆಡ್ ಇದರ ಮಾನವ ಸಂಪನ್ಮೂಲ ವ್ಯವಸ್ಥಾಪಕ ಆಸಿಫ್ ಇಕ್ಬಾಲ್ ಎಲಿಮಲೆಯವರು ನಿರೂಪಿಸಿದರು. ಸಜ್ಜನ ಪ್ರತಿಷ್ಠಾನದ ನಿರ್ದೇಶಕ ತಾಜುದ್ದೀನ್ ಉಬೈದು, ಶಶಿಕಾಂತ್ ಬೆಡಸೂರು, ಮಂಜುನಾಥ್ ಹಿರಿಯೂರು ಮತ್ತಿತರರು ಹಾಜರಿದ್ದರು.