ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿ ನ, ರಾಮ ಕುಂಜ ಗ್ರಾಮದ ಆತೂರು – ಕುಂಡಾಜೆಯ ಸರಕಾರಿ ಗೇರು ಬೀಜದ ತೋಟದಲ್ಲಿ ಅಪರೂಪದ ಗುಹಾ ಸಮಾಧಿ ಕಂಡು ಬಂದಿದೆ.
ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದು ದೊಡ್ಡ ವೃತ್ತವನ್ನು ಕೆಂಪು ಮುರಕಲ್ಲಿನ ಮೇಲೆ ರಚಿಸಿ ಸಮಾಧಿಯ ಇರುವಿಕೆಯನ್ನು ಗುರುತಿಸಿರುವುದು ಕಡಬದ ಗುಹಾ ಸಮಾಧಿಯ ವಿಶೇಷವಾಗಿದೆ. ಇದು ಶಿಲಾಯುಗ ಸಂಸ್ಕೃತಿಯದ್ದಾಗಿದೆ. ಕರ್ನಾಟಕವೂ ಒಳಗೊಂಡಂತೆ ದಕ್ಷಿಣ ಭಾರತದ ಒಂದು ಪ್ರಮುಖ ಇತಿಹಾಸ ಪೂರ್ವ ಯುಗದ ಸಂಸ್ಕೃತಿ ಎಂದು ಹೇಳಲಾಗುತ್ತಿದೆ. ಸಮಾಧಿಯ ಪರಿಶೀಲನೆ ವೇಳೆ ಮಡಿಕೆಯ ಸಣ್ಣ ಚೂರುಗಳು ಕೂಡ ಪತ್ತೆಯಾಗಿದೆ. ನಿಧಿಗಳ್ಳರು ಮಡಿಕೆ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದಿರಬಹುದು ಎಂದು ಶಂಕಿಸಲಾಗಿದೆ.