ನ್ಯೂಸ್ ನಾಟೌಟ್: ಕೆಲಸ ಮಾಡೋಕೆ ಸಾವಿರ ದಾರಿ ಇದೆ. ಆದರೆ ಹಗಲು-ರಾತ್ರಿ ಅನ್ನದೆ ಜನರಿಗಾಗಿ ದುಡಿಯುವ ಕೆಲಸವನ್ನೇ ಅರಸಿಕೊಂಡ ಸುಳ್ಯದ ನಿಷ್ಠಾವಂತ ಆಂಬ್ಯುಲೆನ್ಸ್ ಚಾಲಕ ಅಂದ್ರೆ ಅದು ಪ್ರಗತಿ ಅಚ್ಚು (ಅಬ್ದುಲ್ ರಜಾಕ್).
ಹಲವಾರು ವರ್ಷಗಳಿಂದ ಸಮಾಜ ಮುಖಿ ಕೆಲಸ ಮಾಡುತ್ತಿದ್ದರೂ ಪ್ರಗತಿ ಅಚ್ಚು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇತ್ತೀಚೆಗೆ ರಂಜಾನ್ ಹಬ್ಬದ ದಿನವೇ ಶವವೊಂದನ್ನು ಎತ್ತುವ ಕರ್ತವ್ಯದಲ್ಲಿದ್ದರು. ಇದನ್ನು ಗಮನಿಸಿದ ನಾವು ‘ನ್ಯೂಸ್ ನಾಟೌಟ್’ ನಲ್ಲಿ ಇವರ ಬಗ್ಗೆ ಸಮಗ್ರ ವರದಿ ಮಾಡಿದ್ದೆವು. ಹಬ್ಬದ ಖುಷಿಯಲ್ಲಿರಬೇಕಾದ ಅಚ್ಚು ತನ್ನ ಕರ್ತವ್ಯವನ್ನು ಮರೆಯದೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವುದನ್ನು ಅಕ್ಷರ ರೂಪಕ್ಕೆ ತಂದಿದ್ದೆವು. ಈ ಬೆನ್ನಲ್ಲೇ ಅಚ್ಚುವಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಸನ್ಮಾನ, ಗೌರವಗಳು ಅರಸಿಕೊಂಡು ಬಂದವು. ಇದಕ್ಕಿಂತಲೂ ಖುಷಿಯ ವಿಚಾರವೆಂದರೆ ಅಚ್ಚು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮಟ್ಟದ ‘ಆರೋಗ್ಯ ರಕ್ಷಾ ಸಮಿತಿ’ಗೆ ಕರ್ನಾಟಕ ಸರ್ಕಾರ ರಾಜ್ಯಪಾಲರ ಆದೇಶದ ಅನುಸಾರ ಅಧಿಕಾರೇತರ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಅಚ್ಚು ನೂರಾರು ಕೊಳೆತ ಶವಗಳನ್ನು ಕೈಯಿಂದ ಬಾಚಿ ತೆಗೆದಿದ್ದಾರೆ. ಜೀವದ ಹಂಗು ತೊರೆದು ನೀರಿನಾಳದಲ್ಲಿ ಹುದುಗಿದ್ದ ಶವಗಳನ್ನು ಮೇಲೆತ್ತಿದ್ದಾರೆ. ಅಪಘಾತ, ದುರಂತ ಏನೇ ನಡೆದರೂ ಅಚ್ಚು ಮೊದಲಾಗಿ ಮುನ್ನುಗ್ಗಿ ಸಂತ್ರಸ್ತರನ್ನ ತನ್ನ ಆಂಬ್ಯುಲೆನ್ಸ್ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸುತ್ತಾರೆ. ಹಣ, ಅಧಿಕಾರಕ್ಕಿಂತ ಮನುಷ್ಯತ್ವವೇ ಮೇಲು ಅನ್ನುವ ಅಚ್ಚುವಿನ ಗುಣಕ್ಕೆ ನಾವೆಲ್ಲರೂ ಹ್ಯಾಟ್ಸಾಪ್ ಹೇಳೋಣ. ಇಂಥಹವರನ್ನು ನಮ್ಮ ಸಂಸ್ಥೆಯಲ್ಲೂ ಗೌರವಿಸಬೇಕು ಅನ್ನುವ ಕಾರಣಕ್ಕೆ ಅವರನ್ನು ಸಂಸ್ಥೆಗೆ ಆಹ್ವಾನಿಸಿದೆವು. ಶಾಲು, ಪೇಟಾ, ಹಣ್ಣು ಹಂಪಲು, ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದೆವು. ಈ ವೇಳೆ ಮಾತನಾಡಿದ ಅಚ್ಚು, ‘ನ್ಯೂಸ್ ನಾಟೌಟ್ ಸಂಸ್ಥೆ ಮೊದಲನೆಯದಾಗಿ ನನ್ನನ್ನು ಗುರುತಿಸಿತು. ಮಾಧ್ಯಮದ ಮೂಲಕ ಪ್ರಚಾರ ಮಾಡಿತು. ಆ ನಂತರದ ದಿನಗಳಲ್ಲಿ ನನ್ನ ಜೀವನದಲ್ಲಿ ಹಲವು ಬದಲಾವಣೆ ಕಂಡಿದ್ದೇನೆ. ಈಗ ಎಲ್ಲರೂ ಕೂಡ ನನ್ನನ್ನು ಮಾತನಾಡಿಸುತ್ತಿದ್ದಾರೆ, ಸನ್ಮಾನಿಸುತ್ತಿದ್ದಾರೆ. ತುಂಬಾ ಖುಷಿಯಿದೆ. ನಿಮ್ಮ ವರದಿಗೆ ಧನ್ಯವಾದಗಳು..’ ಎಂದು ತಿಳಿಸಿದರು.
ಅಚ್ಚು ಜೊತೆಗೆ ಹಗಲಿರುಳೆನ್ನದೆ ಜೊತೆಗೂಡಿ ಕೆಲಸ ನಿರ್ವಹಿಸುವ ಶೌರ್ಯ ವಿಪತ್ತು ಘಟಕದ ಚಿದಾನಂದ ಹಾಗೂ ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಅವರನ್ನೂ ಗೌರವಿಸಲಾಯಿತು. ಇವರಿಬ್ಬರು ಸದಾ ಅಚ್ಚುವಿನ ಜೊತೆಗಿದ್ದು ಕೆಲಸ ಮಾಡುವ ಪ್ರಾಣ ಸ್ನೇಹಿತರಾಗಿದ್ದಾರೆ. ಈ ಸ್ನೇಹ ಚಿರಕಾಲ ಇರಲಿ ಎಂದು ಹಾರೈಸೋಣ.