ಪುತ್ತೂರು: ಪೊಲೀಸರನ್ನು ನೋಡಿ ಗಾಬರಿಗೊಂಡ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಆತನೇ ಕಳ್ಳ ಎನ್ನುವ ವಿಚಾರ ಬೆಳಕಿಗೆ ಬಂದ ಸ್ವಾರಸ್ಯಕರ ಘಟನೆ ಪುತ್ತೂರಿನ ಸಂಟ್ಯಾರಿನಲ್ಲಿ ಎ.24ರ ತಡರಾತ್ರಿ ನಡೆದಿದೆ. ಈತ ಕಳ್ಳತನ ಮಾಡಿಕೊಂಡು ಬೆಳ್ಳಾರೆಯಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಎನ್ನುವ ಮಾಹಿತಿಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸೆಂಟ್ಯಾರ್ ಬಳಿ ಎ.24ರ ರಾತ್ರಿ ಅನುಮಾನಾಸ್ಪದವಾಗಿ ಒಬ್ಬ ವ್ಯಕ್ತಿ ನಿಂತಿದ್ದ. ನಿಂತಿರುವುದನ್ನು ನೋಡಿ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಆಗ ಆತ ಸುಳ್ಳು ಹೇಳಿದ್ದಾನೆ ಅನ್ನುವುದು ಪೊಲೀಸರ ಅರಿವಿಗೆ ಬಂದಿದೆ. ತಕ್ಷಣ ಪೊಲೀಸ್ ಭಾಷೆಯಲ್ಲಿಯೇ ಮತ್ತಷ್ಟು ವಿಚಾರಿಸಿದ್ದಾರೆ. ಆಗ ಆತ ನಡೆಸಿರುವ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ಆತನಿಂದ ಕಳವು ಮಾಡಿದ್ದ ಐದು ಮೊಬೈಲ್ ಫೋನ್, ಸ್ಕೂಟಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾಸರಗೋಡು ತಾಲೂಕಿನ ಎಣ್ಮಕಜೆ ಗ್ರಾಮದ ಅಡ್ಕಸ್ಥಳ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಇರುವ ಉಮೈದ್(24ವ.) ಬಂಧಿತ ಆರೋಪಿ. ಆರಂಭದಲ್ಲಿ, ತಾನು ವಿಟ್ಲದ ಮೊಹಮ್ಮದ್, ಉಪ್ಪಿನಂಗಡಿಯ ಆಸೀಫ್ ಎಂದು ಹೇಳಿ ಪೊಲೀ ಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಸದ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.