ನ್ಯೂಸ್ ನಾಟೌಟ್: ಭೂಕುಸಿತದ ಕರಾಳತೆ ಮಾಸುವ ಮುನ್ನವೇ ವಯನಾಡಿಗೆ ಈಗ ಭೂಕಂಪದ (Wayanad Earthquake) ಭೀತಿ ಎದುರಾಗಿದೆ. ಆ.9ರ ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ – ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದಿನಂತೆ ಶಬ್ದ ಕೇಳಿಸಿತು ಎನ್ನಲಾಗಿದೆ.
ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ.
ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ.