ನ್ಯೂಸ್ ನಾಟೌಟ್: ಇರಾಕ್ ಸಂಸತ್ತಿನಲ್ಲಿ ಪ್ರಸ್ತಾವಿತ ಮಸೂದೆಯೊಂದು ವ್ಯಾಪಕ ಆಕ್ರೋಶ ಮತ್ತು ಕಳವಳ ಹುಟ್ಟುಹಾಕಿದೆ. ಈ ಮಸೂದೆ ಆ ದೇಶದಲ್ಲಿ ಕಾನೂನಾಗಿ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಹೆಣ್ಣುಮಕ್ಕಳ ವಿವಾಹದ ಕಾನೂನುಬದ್ಧ ವಯಸ್ಸನ್ನು ಕೇವಲ 9 ವರ್ಷಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.
ಇರಾಕ್ ನ್ಯಾಯ ಸಚಿವಾಲಯವು ಪರಿಚಯಿಸಿದ ವಿವಾದಾತ್ಮಕ ಶಾಸನವು, ದೇಶದ ವೈಯಕ್ತಿಕ ಸ್ಥಿತಿಯ ಕಾನೂನನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಇರುವ ಕಾನೂನು ಮದುವೆಗೆ ಕನಿಷ್ಠ ವಯಸ್ಸನ್ನು 18 ಕ್ಕೆ ನಿಗದಿಪಡಿಸಿದೆ.
ಮಸೂದೆ ಅಂಗೀಕಾರವಾದರೆ, 9 ವರ್ಷ ವಯಸ್ಸಿನ ಹುಡುಗಿಯರು ಮತ್ತು 15 ವರ್ಷ ವಯಸ್ಸಿನ ಹುಡುಗರು ವಿವಾಹವಾಗಲು ಅವಕಾಶ ಇರುತ್ತದೆ. ಇದು ಹೆಚ್ಚಿನ ಬಾಲ್ಯ ವಿವಾಹ ಮತ್ತು ಹೆಣ್ಣಿನ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಈ ಪ್ರತಿಗಾಮಿ ಕ್ರಮವು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯನ್ನು ದುರ್ಬಲಗೊಳಿಸುತ್ತದೆ ಎಂದು ಜನರು ಆಕ್ರೋಶಗೊಂಡಿದ್ದಾರೆ.