ನ್ಯೂಸ್ ನಾಟೌಟ್: ಗುಡ್ಡ ಕುಸಿತದಿಂದ ನಿಂತಿದ್ದ ಮಂಗಳೂರು – ಬೆಂಗಳೂರು ರೈಲು ಮಾರ್ಗ ಸಂಚಾರ ಮತ್ತೆ ಪುನರಾರಂಭಗೊಂಡಿದೆ.
ಎಡಕುಮೇರಿ- ಕಡಗರ ಹಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದ ಮೇಲೆ ಭೂ ಕುಸಿತ ಸಂಭವಿಸಿತ್ತು. ಇದರಿಂದಾಗಿ ಸುಮಾರು 12 ದಿನ ರೈಲು ಸಂಚಾರ ನಿಷೇಧಿಸಲಾಗಿತ್ತು.
ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಹಗಲು-ರಾತ್ರಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. 3,500ಕ್ಕೂ ಅಧಿಕ ಘನ ಮೀಟರ್ ಬಂಡೆಗಳನ್ನು, 1 ಲಕ್ಷ ಮರಳು ತುಂಬಿದ ಚೀಲಗಳನ್ನು, 10ರಷ್ಟು ಹಿಟಾಚಿ ಮತ್ತಿತರ ಯಂತ್ರಗಳ ಸಹಿತ ದುರಸ್ತಿ ಕಾರ್ಯಕ್ಕೆ ಬೇಕಾಗುವ ಕಚ್ಚಾ ವಸ್ತುಗಳು, ಕಾರ್ಮಿಕರ ಅಗತ್ಯ ವಸ್ತುಗಳನ್ನು ಸ್ಥಳಕ್ಕೆ ಪೂರೈಸಿ ನಿರಂತರ ಶ್ರಮಿಸಲಾಗಿತ್ತು. ಆ. 20ರ ವರೆಗೂ ಕೆಲವು ಪೂರಕ ಕೆಲಸಗಳು ಸ್ಥಳದಲ್ಲಿ ಮುಂದುವರಿಯಲಿವೆ ಎಂದು ತಿಳಿದು ಬಂದಿದೆ.
ಆ.4ರಂದು ದುರಸ್ತಿಯನ್ನು ಬಹುತೇಕ ಪೂರ್ಣಗೊಳಿಸಿ, ಪರಿಶೀಲಿಸಿ ಎಂಜಿನ್ ಓಡಾಟ ನಡೆಸಲಾಗಿತ್ತು. ಆ. 6ರಂದು ತಾಸಿಗೆ 15 ಕಿ.ಮೀ. ವೇಗದಲ್ಲಿ ತುಂಬಿದ ಗೂಡ್ಸ್ ರೈಲು ಓಡಾಟ ನಡೆಸಲಾಗಿತ್ತು. ಬಳಿಕ ಗೂಡ್ಸ್ ರೈಲು ಓಡಾಟ ಪುನರಾರಂಭ ಮಾಡಲಾಗಿತ್ತು. ಗುರುವಾರದಿಂದ ಪ್ರಯಾಣಿಕ ರೈಲುಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಅದರಂತೆ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ರೈಲು ಮಧ್ಯಾಹ್ನ ದುರಸ್ತಿ ನಡೆಸಲಾದ ಸ್ಥಳದ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಮುಂದೆ ಈ ಮಾರ್ಗದಲ್ಲಿ ನಿಗದಿತ ದಿನಾಂಕ, ಸಮಯದಂತೆ ಎಲ್ಲ ರೈಲುಗಳು ಸಂಚರಿಸಲಿವೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
2018ರ ಆಗಸ್ಟ್ನಲ್ಲಿ ಭಾರೀ ಮಳೆಗೆ ಸಿರಿಬಾಗಿಲು – ಎಡಕುಮೇರಿ ನಡುವೆ ಹಲವೆಡೆ ರೈಲು ಮಾರ್ಗದ ಮೇಲೆ ಗುಡ್ಡ ಕುಸಿದ ಪರಿಣಾಮ ಆಗ ಸುಮಾರು 40 ದಿನ ರೈಲು ಸಂಚಾರ ಸ್ಥಗಿತಗೊಂಡಿದ್ದನ್ನು ಸ್ಮರಿಸಬಹುದು.