ನ್ಯೂಸ್ ನಾಟೌಟ್: ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆಗೆ ಬೆಂಕಿ ಬಿದ್ದು ಬೆಳಗಾವಿಯಲ್ಲಿ ದೊಡ್ಡ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಜೀವ ದಹನವಾಗಿದ್ದು 16 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತನ ಮೂಳೆಗಳು ಸಿಕ್ಕಿವೆ. ಆದರೆ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (19) ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟಿರೋದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಯ ನಿರ್ವಹಣೆ ಜವಾಬ್ದಾರಿ ಹೊತ್ತು ಕಾರ್ಖಾನೆಗೆ ಕೆಲಸ ಸೇರಿದ್ದ ಮಗ ಕಾರ್ಖಾನೆಗೆ ಬಿದ್ದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾನೆ. ಮನೆ ಮಗ ಸುಟ್ಟು ಕರಕಲಾಗಿ ಮೂಳೆಗಳು ಮಾತ್ರ ಸಿಕ್ಕಿದ್ದು ಮೂಳೆಗಳನ್ನು ಕೈ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಡಲಾಗಿದೆ. ಮಗನ ಸಾವಿನ ನೋವಿನಲ್ಲಿರುವ ತಂದೆ ಮೂಳೆಗಳನ್ನು ಕೈಯಲ್ಲಿ ಹಿಡಿದು ಮತ್ತಷ್ಟು ರೋಧಿಸಿದ್ದಾರೆ.
ಈ ರೀತಿ ಕೈ ಚೀಲದಲ್ಲಿ ಮೂಳೆಗಳನ್ನು ಹಾಕಿ ಕೊಡುವುದು ಎಷ್ಟು ಸರಿ ಎಂದು ಜನ ಆಕ್ರೋಶ ಹೊರ ಹಾಕಿದ್ದಾರೆ. ಮೃತ ಯುವಕನಿಗೆ ಕನಿಷ್ಠ ಮಟ್ಟದ ಗೌರವ ನೀಡದೆ ಮೃತದೇಹ ಸಾಗಾಣೆಗೆ ವಾಹನ ವ್ಯವಸ್ಥೆ ಮಾಡದೆ, ಈ ರೀತಿ ತರಕಾರಿ ತರುವ ಚೀಲದಲ್ಲಿ ನೀಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಅಧಿಕಾರಿಗಳ ನಡೆಗೆ ಕಿಡಿಕಾರಿದ್ದಾರೆ.
ಜೆಸಿಬಿ ಮೂಲಕ ಗೋಡೆ ಹೊಡೆದು ಸುಟ್ಟು ಕರಕಲಾಗಿದ್ದ ಯಲಪ್ಪನ ದೇಹದ ಮೂಳೆಗಳನ್ನು ಹೊರ ತೆಗೆದರು. ಬಳಿಕ ಕುಟುಂಬಸ್ಥರು, ತಹಶಿಲ್ದಾರ, ಡಿಎಚ್ಒ ಸ್ಥಳ ಪಂಚನಾಮೆ ಮಾಡಿ ಮೂಳೆಯೊಂದನ್ನ ಡಿಎನ್ಎ ಟೆಸ್ಟ್ ಗೆ ಎಫ್ ಎಸ್ ಎಲ್ ತಂಡ ರವಾನೆ ಮಾಡಿತು. ಅಳಿದೂಳಿದ ಮೂಳೆಗಳನ್ನ ಕುಟುಂಬಸ್ಥರಿಗೆ ಚೀಲದಲ್ಲಿ ನೀಡಿದ್ದಾರೆ ಎನ್ನಲಾಗಿದೆ.
Click