ನ್ಯೂಸ್ ನಾಟೌಟ್: ಕೇರಳದ ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ಮೊದಲ ತುರ್ತು ಕರೆ ಮಾಡಿದ್ದ ಮಹಿಳೆಯೊಬ್ಬರೂ ಅದೇ ಘಟನೆಯಲ್ಲಿ ಮೃತಪಟ್ಟಿರುವ ಬಗ್ಗೆ ದೃಢಪಟ್ಟಿದೆ. ವಯನಾಡ್ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿದ್ದ ನೀತು ಜೊಜೊ (40) ಭೂಕುಸಿತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನೀತು ಜು.30ರಂದು ಚೋರಲಾಮಾಲಾದಲ್ಲಿ ಮೊದಲ ಭೂಕುಸಿತ ಸಂಭವಿಸಿದಾಗ ರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರಿಗೆ ಚೋರಲಾಮಾಲಾದ ಮನೆಯಿಂದ ತುರ್ತು ಕರೆ ಮಾಡಿದ್ದರು. ‘ಶಾಲೆ ಬಳಿ ನಮ್ಮ ಮನೆ ಇದೆ. ಮನೆಗೆ ಭಾರಿ ಪ್ರಮಾಣದಲ್ಲಿ ನೀರು, ಮಣ್ಣು ನುಗ್ಗುತ್ತಿದೆ. ಐದಾರು ಕುಟುಂಬಗಳು ನಮ್ಮ ಅಕ್ಕ–ಪಕ್ಕ ಇವೆ. ಹೇಗಾದರೂ ಮಾಡಿ ರಕ್ಷಣೆ ಮಾಡಿ’ ಎಂದು ನೀತು ಜೋರಾಗಿ ಮೊಬೈಲ್ನಲ್ಲಿ ಮಾತನಾಡಿದ್ದು ತುರ್ತು ಕರೆ ಘಟಕದಲ್ಲಿ ದಾಖಲಾಗಿದೆ.
ನೀತು ಅವರೇ ವಯನಾಡ್ ಭೂಕುಸಿತದ ಬಗ್ಗೆ ಮೊದಲು ಕರೆ ಮಾಡಿ ಮಾಹಿತಿ ನೀಡಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ವಯನಾಡ್ನಿಂದ ಅಂಬುಲೆನ್ಸ್ ಚೋರಲಾಮಾಲಾಕ್ಕೆ ತೆರಳುವ ವೇಳೆ ಅದಾಗಲೇ ಭಾರಿ ಮಳೆಗೆ ಎರಡನೇ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿದ್ದರಿಂದ ಸಂಪರ್ಕ ಮಾರ್ಗಗಳು ಕಡಿತಗೊಂಡಿದ್ದವು. ನೀತು ಅವರನ್ನು ರಕ್ಷಣೆ ಮಾಡಲಾಗಲಿಲ್ಲ. ಅವರ ಮೃತದೇಹ ಈಗ(ಆ.5) ಸಿಕ್ಕಿದೆ. ಘಟನೆಯಲ್ಲಿ ಅವರ ತಾಯಿ ಹಾಗೂ ಮಕ್ಕಳು ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಿಯಾರ್ ನದಿಯಲ್ಲಿ 166 ಅಂಗಾಂಗಗಳು ಸಿಕ್ಕಿವೆ. ಅನಧಿಕೃತವಾಗಿ ಮೃತರ ಸಂಖ್ಯೆ 375 ಎನ್ನಲಾಗಿದೆ.
Click