ನ್ಯೂಸ್ ನಾಟೌಟ್: ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತ, ಜಲಪ್ರಳಯದ ಅನಾಹುತದ ನಡುವೆ ಸಿಲುಕಿದ ಅಜ್ಜಿ- ಮೊಮ್ಮಗಳಿಗೆ ಕಾಡಾನೆಯೊಂದು ಆಶ್ರಯ ನೀಡಿದ ಕುತೂಹಲಕಾರಿ ಘಟನೆಯೊಂದು ವರದಿಯಾಗಿದೆ.
ವಯನಾಡ್ ಸಮೀಪದ ಚೂರಲ್ವುಲ ಭೂಕುಸಿತದಲ್ಲಿ ಅಪಾರ ಹಾನಿಯಾಗಿತ್ತು. ಅದರಲ್ಲೂ ಪವಾಡ ಸದೃಶ್ಯವಾಗಿ ಬದುಕುಳಿದ ಸುಜಾತಾ ಎಂಬ ಮಹಿಳೆಯ ಅಂದಿನ ಘಟನೆಯನ್ನು ವಿವರಿಸಿದ್ದಾರೆ. ಅಂದು ಇದ್ದಕ್ಕಿದ್ದಂತೆ ಜೋರಾದ ಸದ್ದು ಕೇಳಿಬಂತು. ಕಿಟಕಿ ತೆಗದು ನೋಡಿದರೆ ಸುತ್ತಲೂ ನೀರು ಆವರಿಸಿತ್ತು. ತನ್ನ ನಿವಾಸದ ಪಕ್ಕದಲ್ಲಿದ್ದ 2 ಅಂತಸ್ತಿನ ಕಟ್ಟಡ ಕೂಡ ಕುಸಿದು ಬಿದ್ದಿತ್ತು. ತತ್ಕ್ಷಣ ಮೊಮ್ಮಗಳ ಕೈಹಿಡಿದು ಮನೆಯಿಂದ ಹೊರ ಬಂದು ನೆರೆಮನೆಯ ಬಳಿಗೆ ಈಜಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟರಲ್ಲೇ ಮಗ, ಸೊಸೆ ಮತ್ತು ಮೊಮ್ಮಗ ಆ ಮನೆ ತಲುಪಿದ್ದು, ಸುಜಾತಾ ಮತ್ತು ಅವರ ಮೊಮ್ಮಗಳ ಕೈಹಿಡಿದು ಮೇಲೆ ಎಳೆದುಕೊಂಡಿದ್ದಾರೆ. ಬಳಿಕ ಅಲ್ಲಿಂದ ಕಾಫಿ ತೋಟದ ಮಾರ್ಗ ವಾಗಿ ಎಲ್ಲರೂ ಓಡಲಾರಂಭಿಸಿದ್ದಾರೆ.
ಮಗ, ಸೊಸೆ ಮತ್ತು ಮೊಮ್ಮಗ ಅಲ್ಲಿಂದ ಪಾರಾಗುತ್ತಿದ್ದಂತೆ ತನಗೆ ಹಾಗೂ ಅವರ ಮೊಮ್ಮಗಳಿಗೆ ಕಾಡಾನೆಯೊಂದು ಎದುರಾಯಿತು. ಆನೆ ಎದುರಾದ ಬಳಿಕ ಸುಜಾತಾ ಅದರ ಎದುರು ಕೈಮುಗಿದು ಪ್ರಾರ್ಥಿಸಿ, ಬಹುದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ. ದಯವಿಟ್ಟು ನಮಗೆ ತೊಂದರೆ ನೀಡದಿರು ಎಂದರಂತೆ. ಬಳಿಕ ಸುತ್ತಲೂ ಕತ್ತಲು ಆವರಿಸಿ, ಜೋರು ಮಳೆಯಾಗುತ್ತಿದ್ದ ಕಾರಣ ಆನೆಯ ಕಾಲಿನ ಬುಡದಲ್ಲೇ ತಾವು ಕುಳಿತಿದ್ದುದಾಗಿ ಹೇಳಿಕೊಂಡಿರೆ. ಅವರಿದ್ದೆಡೆಗೆ ಇನ್ನೂ 2 ಕಾಡಾನೆಗಳು ಬಂದವು. ಆದರೆ ಯಾವ ಆನೆಯೂ ತೊಂದರೆ ನೀಡದೆ ಬೆಳಗ್ಗಿನ ಜಾವದ ವರೆಗೂ ತಮ್ಮನ್ನು ರಕ್ಷಿಸಿವೆ ಎಂಬುದಾಗಿ ಸುಜಾತಾ ಹೇಳಿಕೊಂಡಿದ್ದಾರೆ. ಬಳಿಕ ಯಾರೋ ಅಪರಿಚಿತರು ಬಂದು ಅಜ್ಜಿ -ಮೊಮ್ಮಗಳನ್ನು ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಮತ್ತೆ ಕುಟುಂಬಸ್ಥರು ಸಿಕ್ಕಿದರು ಎಂದು ಮಾಹಿತಿ ನೀಡಿದ್ದಾರೆ. ನಿಜಕ್ಕೂ ಇಂಥದೊಂದು ಘಟನೆ ಕುತೂಹಲ ಮೂಡಿಸುತ್ತದೆ. ಅಜ್ಜಿ ಮಾಧ್ಯಮಕ್ಕೆ ನೀಡಿದ ಈ ವಿಡಿಯೋ ಸದ್ಯ ಭಾರಿ ವೈರಲ್ ಆಗುತ್ತಿದೆ.