ನ್ಯೂಸ್ ನಾಟೌಟ್: ಪ್ರಸ್ತುತ ಕಾನೂನು ಶಿಕ್ಷಣಕ್ಕೆ ಬಹಳ ಬೇಡಿಕೆಯಿದ್ದು, ವಿಷಯದ ಸಮಗ್ರ ಅಧ್ಯಯನ ಅತ್ಯಗತ್ಯ. ಜೊತೆಗೆ ಪ್ರಸ್ತುತ ಬೆಳವಣಿಗೆಗಳ ಬಗೆಗಿನ ಆಳವಾದ ತಿಳುವಳಿಕೆಗೆ ಪುಸ್ತಕಗಳು ಹಾಗೂ ವಾರ್ತಾಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಭಿಪ್ರಾಯಪಟ್ಟರು.
ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ (ಜುಲೈ 31) 34ನೇ ವರ್ಷದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಜ್ಯೋತಿ ವಿದ್ಯಾ ಸಂಘ(ರಿ) ಪೆರಾಜೆ ಇದರ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಮಾತನಾಡಿ, ಕಾನೂನು ಸಂವಿಧಾನದ ಮೂರನೇ ಆಧಾರಸ್ತಂಭವಾಗಿದ್ದು, ಕಾನೂನು ಶಿಕ್ಷಣಕ್ಕೆ ವಿಪುಲ ಅವಕಾಶವಿದೆ. ಕೆವಿಜಿ ಕಾನೂನು ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಜತೆಗೆ ಕಾನೂನು ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಸಲಹೆಗಾರ ಕೆ.ವಿ. ದಾಮೋಧರ ಗೌಡ ಮಾತನಾಡಿ, ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಅನೇಕ ಹುದ್ದೆಯನ್ನು ಅಲಂಕರಿಸಿದ ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ಬಿ. ಕಾಲೇಜಿನ ವರದಿ ವಾಚಿಸಿದರು. ವಿದ್ಯಾರ್ಥಿನಿ ರಮ್ಯ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಎಚ್.ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ರಶ್ಮಿ ಎಚ್.ಎಸ್. ಹಾಗೂ ಕುಮಾರಿ ಬೇಬಿ ವಿದ್ಯಾ ಪಿ.ಬಿ. ಅತಿಥಿಗಳನ್ನು ಪರಿಚಯಿಸಿದರು. ದತ್ತಿನಿಧಿ, ಕಲಿಕೆ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧಾ ವಿಜೇತರ ಪಟ್ಟಿಯನ್ನು ಉಪನ್ಯಾಸಕರಾದ ರಚನಾ ಕೆ. ಲಕ್ಷ್ಮಿಕಾಂತ್ ಕೆ.ಎಲ್. ನಯನಾ ಪಿ. ವಾಚಿಸಿದರು. ಉಪನ್ಯಾಸಕಿ ಕಲಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಎಚ್.ಆರ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿಧ್ಯ ಪ್ರಸ್ತುತಗೊಂಡಿತು.