ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಎತ್ತ ನೋಡಿದರತ್ತ ಗುಡ್ಡ ಕುಸಿತದ ಭೀತಿಯೇ ವ್ಯಕ್ತವಾಗುತ್ತಿದೆ. ಅಂತೆಯೇ ನಿರಂತರ ಮಳೆಗೆ ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಕರ್ತೊಜಿ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿಯುವ ಭೀತಿ ವ್ಯಕ್ತವಾಗಿದೆ.
ವಾರಗಳ ಹಿಂದೆ ಇಲ್ಲಿ ಮಣ್ಣು ಕುಸಿಯುವ ಆತಂಕ ಇದ್ದುದರಿಂದ ಘನ ವಾಹನಗಳ ರಾತ್ರಿ ಸಂಚಾರವನ್ನು ಆ ದಾರಿಯಲ್ಲಿ ನಿಷೇಧಿಸಲಾಗಿತ್ತು. ಇದೀಗ ಮತ್ತೆ ಘನ ವಾಹನಗಳ ಪ್ರಯಾಣ ಆರಂಭ ಪಡೆದುಕೊಂಡಿದೆ. ಆದರೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಇಡೀ ದಿನ ನಿರಂತರವಾಗಿ ಮಳೆ ಸುರಿದುದರಿಂದ ಮತ್ತೆ ಆ ಭಾಗದಲ್ಲಿ ಗುಡ್ಡ ಕುಸಿತದ ಭೀತಿ ವ್ಯಕ್ತವಾಗಿದೆ. ಜಿಲ್ಲಾಡಳಿತ ಇದೀಗ ಪೊಲೀಸ್ ಬಂದೂಬಸ್ತ್ ಮೂಲಕ ವಾಹನಗಳ ಸಂಚಾರಕ್ಕೆ ಆ ಭಾಗದಲ್ಲಿ ಅನುವು ಮಾಡಿಕೊಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.