ನ್ಯೂಸ್ ನಾಟೌಟ್: ತಂದೆ ತಾಯಿ ಆರ್ಥಿಕವಾಗಿ ಅಸಹಾಯಕರಾದ ಹೆಚ್ಚಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನೆರವಾಗುವುದು ಸೋದರ ಮಾವ. ಕೆಲವೊಮ್ಮೆ ಸೊಸೆಯ ಮೇಲಿನ ಮಮಕಾರದಿಂದ ಆಕೆಯ ಎಲ್ಲಾ ಕಾರ್ಯಕ್ರಮಗಳು ತನ್ನ ಸುಪರ್ದಿಯಲ್ಲೇ ನಡೆಯಬೇಕು ಎನ್ನುವ ಮಹದಾಸೆ ಮಾವನದ್ದಾಗಿರುತ್ತದೆ. ಆದರೆ ವಿಧಿಯಾಟದಿಂದ ಸೋದರ ಮಾವ ಅಕಾಲಿಕ ನಿಧನಕ್ಕೆ ಬಲಿಯಾದರೇ ಆ ಕುಟುಂಬಕ್ಕಾಗುವ ನೋವು, ಸಂಕಟ ಅಷ್ಟಿಷ್ಟಲ್ಲ. ಇವೆಲ್ಲದರ ನಡುವೆ ಮಾವನ ಆಸೆ ಈಡೇರಿಸಿದ ಅನಕಾಪಲ್ಲಿಯ ಕುಟುಂಬವೊಂದರ ಪ್ರಯತ್ನ ಇದೀಗ ಎಲ್ಲರ ಮನಗೆದ್ದಿದೆ.
ಆಂಧ್ರಪ್ರದೇಶದ ಅನಕಪಲ್ಲಿ ಗವರಪಾಲೆಂನ ಪೆಂಟಕೋಟ ಕಿರಣ್ ಎಂಬವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಕಿರಣ್ ಗೆ ಸೊಸೆ ಲಾಸ್ಯ ಎಂದರೆ ಪಂಚಪ್ರಾಣ. ಅವರು ತಮ್ಮ ಸೊಸೆಯ ಮೊದಲ ಕಾರ್ಯಕ್ರಮವನ್ನು ತಮ್ಮ ಸಮ್ಮುಖದಲ್ಲಿಯೇ ನಿರ್ವಹಿಸುವ ನಿರೀಕ್ಷೆಯಲ್ಲಿದ್ದರು. ಬಳಿಕ 2020ರಲ್ಲಿ ಕಿರಣ್ಗೆ ವಿವಾಹವಾಗುತ್ತದೆ. ದುರಾದೃಷ್ಟವಶಾತ್ ಅದೇ ವರ್ಷ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಕಿರಣ್ ಪ್ರಾಣ ಕಳೆದುಕೊಳ್ಳುತ್ತಾರೆ.
ಇದೀಗ ಸೊಸೆ ಲಾಸ್ಯಳ ಜೀವನದಲ್ಲಿ ಪ್ರಮುಖವಾದ ಆ ದಿನ ಬಂದಿದೆ. ಆದರೆ ಸೋದರಮಾವ ಕಿರಣ್ ಜೀವಂತವಾಗಿಲ್ಲ. ಆದರೂ ಮೃತ ಕಿರಣನ ಅಕ್ಕ ತನ್ನ ತಮ್ಮನ ಮಹದಾಸೆಯನ್ನು ಪೂರೈಸಲು ಬಯಸಿದ್ದರು. ಆ ಆಲೋಚನೆ ಬಂದ ತಕ್ಷಣ ತನ್ನ ಕಿರಿಯ ಸಹೋದರನ ಮೇಣದ ಆಕೃತಿ ನಿರ್ಮಿಸಲು ಆರ್ಡರ್ ಕೊಡುತ್ತಾಳೆ. ಮೂರೂವರೆ ಲಕ್ಷ ಖರ್ಚು ಮಾಡಿ ಮುಂಬೈನಲ್ಲಿ ಮೇಣದ ಆಕೃತಿ ತಯಾರಿಸಿ ಮಗಳ ಮೊದಲ ಸಮಾರಂಭದಲ್ಲಿ ಅದನ್ನು ನಿಲ್ಲಿಸಿ, ಮಗಳು ಲಾಸ್ಯಳ ಕೈಯಲ್ಲೇ ಆಕೆಯ ಮಾವನ ಮೂರ್ತಿಯನ್ನು ಅನಾವರಣಗೊಳಿಸುತ್ತಾಳೆ.
ಇದರಿಂದ ತನ್ನ ಸೋದರಮಾವ ಕಿರಣ್ ಸಮ್ಮುಖದಲ್ಲಿಯೇ ತನ್ನ ಮೊದಲ ಕಾರ್ಯಕ್ರಮ ನಡೆಯುತ್ತಿದೆ ಎಂದು ಲಾಸ್ಯ ಸಂಭ್ರಮಿಸಿದ್ದಾಳೆ. ಇನ್ನು ಮೇಣದ ಆಕೃತಿಯಲ್ಲಿದ್ದ ಜೀವಂತವಿದ್ದಂತೆ ಕಂಗೊಳಿಸುತ್ತಿದ್ದ ತಮ್ಮ ಮಗನನ್ನು ಕಂಡು ಕಿರಣ್ ತಂದೆ-ತಾಯಿ ನೋವಲ್ಲೂ ಆನಂದವನ್ನು ಕಂಡಿದ್ದಾರೆ. ಮೂರ್ತಿಯನ್ನು ಕಂಡು ಭಾವುಕರಾದ ಅವರು, ತಮ್ಮ ಮಗನೇ ಕಾರ್ಯಕ್ರಮಕ್ಕೆ ಬಂದು ಹರಿಸುತ್ತಿದ್ದಾನೆ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಲಾಸ್ಯಳ ತಾಯಿ ಮಾಧವಿಯವರ ಪ್ರಯತ್ನ ಅಲ್ಲಿದ್ದವರೆಲ್ಲರನ್ನು ಮೆಚ್ಚಿಸಿದೆ.