ನ್ಯೂಸ್ ನಾಟೌಟ್: ವಿಧಾನಸಭೆಯಲ್ಲಿ ಬಿಜೆಪಿ (BJP) ಸದಸ್ಯರ ಮಾತನ್ನು ವಿರೋಧಿಸುವ ಭರದಲ್ಲಿ ಶಾಸಕ ರಾಜೇಗೌಡ ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನು ಗೂಂಡಾ ಎಂದು ಕರೆದಿದ್ದು, ವಿಧಾನ ಸಭೆಯಲ್ಲಿ ಕೆಲಕಾಲ ಭಾರೀ ಗದ್ದಲ ಉಂಟಾಗಿತ್ತು.
ವಿಧಾನಸಭೆಯ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಿರುವ ಕುರಿತಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಯು.ಟಿ ಖಾದರ್ ಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಂವಿಧಾನ ಪರ ಯಾರು ವಿರುದ್ಧ ಯಾರು ಎಂಬ ಬಗ್ಗೆ ಎರಡು ಕಡೆಯವರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದರು. ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸದಸ್ಯರಾದ ಕೆ.ಜೆ ಜಾರ್ಜ್ ಹಾಗೂ ಇತರರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. ತುರ್ತುಪರಿಸ್ಥಿತಿ ಜಾರಿಗೊಳಿಸುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ಆರೋಪ ಮಾಡಿದರೆ, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್, ಗುಜರಾತ್ ನಿಂದ ಕರ್ನಾಟಕದ ಕರಾವಳಿಯವರೆಗೆ ಸ್ಮಗ್ಲರ್ಗಳು ಆಳುತ್ತಿದ್ದರು. ಆದರೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕರೀಂ ಲಾಲ, ಹಾಜಿ ಮಸ್ತಾನ್ ಸೇರಿದಂತೆ ಸ್ಮಗ್ಲರ್ಗಳನ್ನು ಜೈಲಿಗೆ ಹಾಕಿದ್ದು ತುರ್ತುಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯವರು. ಈ ನಿಟ್ಟಿನಲ್ಲಿ ತುರ್ತುಪರಿಸ್ಥಿತಿ ಸಾಧಕ ಬಾಧಕ ಬಗ್ಗೆ ಚರ್ಚೆ ಆಗಲಿ ಎಂದರು. ಈ ವೇಳೆ ಸ್ಪೀಕರ್ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಬಾರದು ಎಂಬ ಆಕ್ರೋಶ ಹೊರಹಾಕುತ್ತಾ ರಾಜೇಗೌಡ ಶಾಸಕ ಹರೀಶ್ ಪೂಂಜಾರನ್ನು ಗೂಂಡಾ ಎಂದು ಕರೆದಿದ್ದಾರೆ.