ನ್ಯೂಸ್ ನಾಟೌಟ್: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅಪಾರ ಸಾವು ನೋವು ಉಂಟಾಗಿದೆ. ಶನಿವಾರ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಚಿಕ್ಕೋಡಿಯ ನಿಪ್ಪಾಣಿ ನಗರದ ಜತ್ರಾಟ್ ವೇಸ್ನಲ್ಲಿ ಗೋಡೆ ಕುಸಿದು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ತಿರುಪತಿ ಹತ್ಕರ (45) ಎಂದು ಗುರುತಿಸಲಾಗಿದೆ. ತಿರುಪತಿ ಅವರು ತಗಡಿನ ಶೆಡ್ನಲ್ಲಿ ವಾಸವಾಗಿದ್ದರು. ಊಟ ಮುಗಿಸಿ ನಿದ್ರೆ ಜಾರಿದಾಗ ತಡರಾತ್ರಿ 2.30ರ ಸುಮಾರು ಪಕ್ಕದ ಗೋಡೆ ಕುಸಿದಿದೆ. ಈ ವೇಳೆ ಗಂಭೀರ ಗಾಯಗೊಂಡ ತಿರುಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.