ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ ಅವರ ಆರೋಗ್ಯ ಹದೆಗೆಟ್ಟಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲೂಟ ಚೆನ್ನಾಗಿಲ್ಲ ಎಂದು ದರ್ಶನ್ ಆರೋಪ ಮಾಡಿದ್ದರು. ಆದರೆ, ಇದನ್ನು ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಈ ಮಧ್ಯೆ ಜೈಲಲ್ಲಿ ದರ್ಶನ್ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ಈಗ ಅವರು ಜ್ವರದಿಂದ ಚೇತರಿಕೆ ಕಂಡಿದ್ದಾರೆ. ಮನೆ ಊಟ ಬೇಕು ಎನ್ನುವ ಕೋರಿಕೆಯ ಅರ್ಜಿಯ ವಿಚಾರಣೆ ಮುಂದೂಡಲ್ಪಡುತ್ತಲೇ ಇದೆ. ಇದರಿಂದ ದರ್ಶನ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗುವುದರ ಜೊತೆಗೆ ಇನ್ನೂ ಅನೇಕರು ಬಂಧನಕ್ಕೆ ಒಳಗಾಗಿದ್ದಾರೆ. ಇದರಿಂದ ಅವರ ಕುಟುಂಬದವರು ಶಾಕ್ಗೆ ಒಳಗಾಗಿದ್ದಾರೆ. ಈ ಮೊದಲು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದ ಅನಿಲ್ ಕುಮಾರ್ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಈಗ ಎ4 ರಘು ತಾಯಿ ಮಂಜುಳಮ್ಮ (70) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ರಘು ಈ ಪ್ರಕರಣದ ಪ್ರಮುಖ ಆರೋಪಿ. ಈತ ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗ ಜಿಲ್ಲೆಯ ಅಧ್ಯಕ್ಷ. ರೇಣುಕಾ ಸ್ವಾಮಿಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದು ಇದೇ ರಘು. ಈ ಕಾರಣದಿಂದಲೇ ರಘು ಎಂಬಾತನನ್ನು ಎ4 ಆರೋಪಿಯನ್ನಾಗಿ ಮಾಡಲಾಗಿದೆ. ಈಗ ಈತ ನ್ಯಾಯಾಂಗ ಬಂಧನದಲ್ಲಿರುವಾಗಲೇ ಈತನ ತಾಯಿ ಮೃತಪಟ್ಟಿದ್ದಾರೆ.
ರಘು ತಾಯಿ ಮಂಜುಳಮ್ಮ ಕಳೆದ 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.