ನ್ಯೂಸ್ ನಾಟೌಟ್: ಆಧಾರ್ ಕಾರ್ಡ್, ವೋಟರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇಲ್ಲದೆ ಸರ್ಕಾರದ ಯಾವುದೇ ಯೋಜನೆಯನ್ನು ಪಡೆದುಕೊಳ್ಳಲಾಗದೆ ದೇಶದ ಪ್ರಜೆಗಳೇ ಅಲ್ಲ ಅನ್ನುವ ರೀತಿಯಲ್ಲಿ ಬದುಕುತ್ತಿದ್ದ ಪುಟ್ಟ ಹುಡುಗನೊಬ್ಬನ ಬಡ ಕುಟುಂಬದ ಬಗ್ಗೆ ನ್ಯೂಸ್ ನಾಟೌಟ್ ಮಾಡಿರುವ ವರದಿಗೆ ಕೊನೆಗೂ ಜಯ ಸಿಕ್ಕಿದೆ.
ಸತತ ವರದಿಗಳ ಮೂಲಕ ‘ನ್ಯೂಸ್ ನಾಟೌಟ್’ ಪಂಜ ಐವತ್ತೊಕ್ಲು ಸ್ಥಳೀಯಾಡಳಿತದ ಗಮನ ಸೆಳೆದಿತ್ತು. ಇದೀಗ ಸ್ಥಳಕ್ಕೆ ಆದಿ ದ್ರಾವಿಡ ಸೇವಾ ಸಮಾಜ ಸೇವೆ ರಾಜ್ಯ, ಜಿಲ್ಲಾ ಹಾಗೂ ಸುಳ್ಯ ಮತ್ತು ಪುತ್ತೂರು ತಾಲೂಕಿನ ಪದಾಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿದರು. ಇಂತಹ ಕುಟುಂಬ ಇರುವುದರ ಬಗ್ಗೆ ಸ್ಥಳೀಯ ಆಡಳಿತ ನಮ್ಮ ಗಮನಕ್ಕೆ ತರಬೇಕಿತ್ತು. ನ್ಯೂಸ್ ನಾಟೌಟ್ ನಲ್ಲಿ ವರದಿ ಬಂದ ಬಳಿಕ ನಮಗೆ ವಿಷಯ ಗೊತ್ತಾಯಿತು. ನಮ್ಮ ಸಮುದಾಯದ ಬಡ ಕುಟುಂಬಕ್ಕೆ ಮೊದಲನೆಯದಾಗಿ ಆಧಾರ್ , ವೋಟರ್ ಕಾರ್ಡ್ ಮಾಡುವ ಕೆಲಸಕ್ಕೆ ನಾವು ಮುಂದಾಗುತ್ತೇವೆ. ಮುಂದಿನ ದಿನಗಳಲ್ಲಿ ಸಣ್ಣ ಮನೆಯ ನಿರ್ಮಾಣ ಮಾಡುವ ಭರವಸೆಯನ್ನೂ ಕುಟುಂಬಕ್ಕೆ ನಾವು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ದ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ್ ನೆಲ್ಲಿಗುಂಡಿ, ರಾಜ್ಯ ಸಂಘಟನ ಕಾರ್ಯದರ್ಶಿ ಪ್ರೇಮ್ ನಾಥ್ ಪಿ ಬಿ ಬಾಲಲ್ ಬಾಗ್, ಪುತ್ತೂರು ತಾಲ್ಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘ ದ ಗೌರವ ಸಲಹೆಗಾರ ಅಣ್ಣಪ್ಪ ಕರೆಕಾಡು, ಪುತ್ತೂರು ತಾಲೂಕು ಗೌರವಧ್ಯಕ್ಷ ಲೋಹಿತ್ ಅಮ್ಚಿನಡ್ಕ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ದ ಸುಳ್ಯ ತಾಲ್ಲೂಕು ಅಧ್ಯಕ್ಷ ಬಾಲ ಕೃಷ್ಣ ದೊಡೆರಿ, ಪ್ರಕಾರ್ಯದರ್ಶಿ ಶೀತ ರಾಮ ಮುರಂಗಲು, ಸಂಘಟನ ಕಾರ್ಯದರ್ಶಿ ವಿಜಯ ಅಲಡ್ಕ, ಮಾಜಿ ಪ್ರದಾನ ಕಾರ್ಯದರ್ಶಿ ದಿಲೀಪ್ ಕೆ ಎಲ್ ಮತ್ತು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ದ ಸುಳ್ಯ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೂರನೇ ತರಗತಿ ಬಾಲಕನೊಬ್ಬನ ಕುಟುಂಬ ಮುರುಕಲು ಗುಡಿಸಲಿನಲ್ಲಿ ವಾಸವಿತ್ತು. ವಯಸ್ಸಾದ ಅಜ್ಜಿ, ತಾಯಿಯ ಜೊತೆ ವಾಸಿಸುತ್ತಿದ್ದ ಬಾಲಕನ ಕುಟುಂಬಕ್ಕೆ ಕನಿಷ್ಟ ಮೂಲಭೂತ ಸೌಕರ್ಯವೂ ಇರಲಿಲ್ಲ. ಸಿದ್ದರಾಮಯ್ಯ ಸರ್ಕಾರ ನೀಡುವ ಉಚಿತ ಭಾಗ್ಯಗಳೂ ಈ ಕುಟುಂಬಕ್ಕೆ ಸಿಗುತ್ತಿರಲಿಲ್ಲ. ಈ ಎಲ್ಲದರ ಬಗ್ಗೆ ನ್ಯೂಸ್ ನಾಟೌಟ್ ಸತತ ವರದಿ ಮಾಡಿ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಇಂತಹ ಕುಟುಂಬಗಳನ್ನು ಗುರುತಿಸದೆ ಸರ್ಕಾರಿ ಸಂಬಳ ಪಡೆದುಕೊಂಡು ಕುರ್ಚಿ ಬಿಸಿ ಮಾಡುತ್ತಿದ್ದ ಸ್ಥಳೀಯಾಡಳಿತದ ಬಗ್ಗೆ ವ್ಯಾಪಕ ಟೀಕೆಗಳು ಕೂಡ ಕೇಳಿ ಬಂದಿದ್ದವು.