ನ್ಯೂಸ್ ನಾಟೌಟ್: ಸಾರ್ವಜನಿಕ ಸೇವೆಯಲ್ಲಿ ಎಲೆಮರೆಯ ಕಾಯಿಯಂತೆ ಇದ್ದು ನಿಸ್ವಾರ್ಥ ಸೇವೆ ಮಾಡುತ್ತಲೇ ಜನಮನಕ್ಕೆ ಹತ್ತಿರವಾಗಿರುವ ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು (ಅಬ್ದುಲ್ ರಜಾಕ್) ಅವರಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಸಂಜೆ ರೋಟರಿ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು.
ಸುಳ್ಯ ಸಿಟಿ ರೋಟರಿ ಕ್ಲಬ್ ವತಿಯಿಂದ ನಡೆದ ‘ಇನ್ಸ್ಟಾಲೇಷನ್ ಸೆರೆಮನಿ’ ಕಾರ್ಯಕ್ರಮದಲ್ಲಿ ಸನ್ಮಾನ ನಡೆಸಲಾಯಿತು. ವೃತ್ತಿ ಜೀವನದಲ್ಲಿ ಹಲವಾರು ಜನರ ಜೀವದ ಆಪತ್ಪಾಂಧವರಾಗಿ, ಅನೇಕ ಕೊಳೆತ ಶವಗಳನ್ನು ನೀರಿನಿಂತ ಮೇಲೆತ್ತಿ, ಹಣಕ್ಕಾಗಿ ಆಸೆ ಪಡದೆ ಕರ್ತವ್ಯವನ್ನೇ ದೇವರೆಂದು ನಂಬಿದ ಅಚ್ಚುವಿನ ಬಗ್ಗೆ ನ್ಯೂಸ್ ನಾಟೌಟ್ ಸಂಪಾದಕೀಯ ಪುಟದಲ್ಲಿ ಬರೆದು ಗುರುತಿಸಲಾಗಿತ್ತು. ಇದನ್ನು ಓದಿದ ಅನೇಕರು ಅಚ್ಚುವಿನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಭಿನಂದನೆಗಳನ್ನು ಸಲ್ಲಿಸಿದ್ದರು. ಇಂತಹ ಸಂದರ್ಭದಲ್ಲಿ ಸುಳ್ಯದ ಸಿಟಿ ರೋಟರಿ ಕ್ಲಬ್ ಅದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದುವರಿದು ತಮ್ಮ ಕಾರ್ಯಕ್ರಮದಲ್ಲಿ ಅಚ್ಚುವನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದೆ.
ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಶಿವ ಪ್ರಸಾದ್ ಕೆವಿ, ರೋಟರಿ ಕ್ಲಬ್ ಸುಳ್ಯ ಸಿಟಿ ಮಾಜಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಾರ್ಯದರ್ಶಿ ನವೀನ್ ಅಳಿಕೆ, ಕಾರ್ಯದರ್ಶಿ ಚೇತನ್ ಪಿ.ಎನ್ , ಖಜಾಂಚಿ ಹೇಮಂತ್ ಕಾಮತ್ ಸಂಘಟನೆಯಲ್ಲಿ ಕಾರ್ಯಕ್ರಮ ನೆರವೇರಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಇನ್ಸ್ಟಾಲಿಂಗ್ ಆಫೀಸರ್ ಆಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್, ಮುಖ್ಯ ಅತಿಥಿಯಾಗಿ ಡಿಸ್ಟ್ರಿಕ್ಟ್ ಗವರ್ನರ್ ಎಲೆಕ್ಷನ್ 2025-26 ರಾಮಕೃಷ್ಣ ಪಿ.ಕೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.