ನ್ಯೂಸ್ ನಾಟೌಟ್: ಪುತ್ತೂರು ಪಾದೆ, ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಆಶ್ರಯದಲ್ಲಿ ವೈದ್ಯರತ್ನಮ್ ಔಷಧ ಶಾಲಾ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಉಚಿತ ಆಯುರ್ವೇದೀಯ ಆರೋಗ್ಯ ತಪಾಸಣಾ ಶಿಬಿರ ಗುರುವಾರ (ಜುಲೈ 11) ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಜರುಗಿತು.
ಕಲ್ಲಮ ರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕ ಡಾ. ಸೀತಾರಾಮ ಭಟ್ ಕಲ್ಲಮ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ಚಿಕಿತ್ಸೆಯ ಉಪಯುಕ್ತತೆಯ ಬಗ್ಗೆ ಆಸ್ಟ್ರೇಲಿಯಾದಂತಹ ದೇಶಗಳೂ ಕೂಡ ಆಸಕ್ತಿ ವಹಿಸಿ ಪ್ರೋತ್ಸಾಹಿಸುತ್ತಿವೆ. ಡಾ. ಬಂಗಾರಡ್ಕ ಅನುಭವಿ ಆಯುರ್ವೇದ ಚಿಕಿತ್ಸಕ. ಅವರ ಕೈಗುಣವನ್ನು ಜನರು ಶ್ಲಾಘಿಸಿದ್ದನ್ನು ತಿಳಿದಿದ್ದೇನೆ ಎಂದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ, ಖ್ಯಾತ ಆಯುರ್ವೇದ ತಜ್ಞವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕ ಮಾತನಾಡಿ, ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು KPME ನೋಂದಾಯಿತ ಆಯುರ್ವೇದ ಆಸ್ಪತ್ರೆಯಾಗಿದ್ದು, ಒಳರೋಗಿ ವಿಭಾಗ ಹಾಗೂ ಪಂಚಕರ್ಮ ಚಿಕಿತ್ಸಾ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ B.A.M.S., M.S.(Ayu) ಅವರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸಕ್ಕರೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ನಡೆಸಿ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಶಿಬಿರದಲ್ಲಿ ಭಾಗವಹಿಸಿದವರಿಗೆ ಮನೆಮದ್ದಿನ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಆರೋಗ್ಯಕ್ಕಾಗಿ ಆಯುರ್ವೇದ ಎಂಬ ಘೋಷವಾಕ್ಯದಡಿಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಧುಮೇಹ (ಸಕ್ಕರೆ ಕಾಯಿಲೆ ), ರಕ್ತದೊತ್ತಡ (ಹೈಪರ್ಟೆನ್ಶನ್ ), ವಾತದಿಂದ ಬರುವ ಸಂಧಿವಾತ, ಗಂಟುನೋವು, ಸೊಂಟನೋವುಗಳಿಗೆ ನಾಡಿ ಪರೀಕ್ಷೆಯ ಮೂಲಕ ಆಯುರ್ವೇದ ರೀತಿಯಲ್ಲಿ ಪರಿಹಾರ ಸೂಚಿಸಲಾಯಿತು. ಎಪ್ಪತ್ತಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು .
ವಿಶೇಷ ಆಹ್ವಾನಿತರಾಗಿ ನರಿಮೊಗರು ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಿ, ಮುಂಡೂರು ಗ್ರಾಮಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಸರ್ವೇದೋಳಗುತ್ತು, ನರಿಮೊಗರು ಯುವಕ ಮಂಡಲ ಅಧ್ಯಕ್ಷ ಸುಧಾಕರ ಕುಲಾಲ್, ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್, ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ನರಿಮೊಗರು ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಸುರೇಶ ಪ್ರಭು ಶೆಟ್ಟಿ ಮಜಲು, ನವೀನ್ ರೈ ಶಿಬರ, ಕೃಷ್ಣಮೂರ್ತಿ ಸಿಂದೂರ ಮನೆ, ರಾಜಾರಾಮ ನೆಲ್ಲಿತ್ತಾಯ, ನಾರಾಯಣ ಬನ್ನಿಂತಾಯ, ಜಯರಾಮ ಪ್ರಭು, ಚಿದಾನಂದ ವೀರಮಂಗಲ, ಪರಮೇಶ್ವರ ಕೂಡುರಸ್ತೆ, ಕುತ್ತಿಗದ್ದೆ ಜನಾರ್ದನ ಜೋಯಿಸ ಉಪಸ್ಥಿತರಿದ್ದರು. ಕಾಂಚನಮಾಲಾ, ಸಿಂದೂರ ಮನೆ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಡಾ.ಶ್ರುತಿ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆ ಸಿಬ್ಬಂದಿ ತುಳಸಿ, ರಂಜಿನಿ, ಸ್ವಾತಿ ಹಾಗೂ ವೈದ್ಯರತ್ನಮ್ ಔಷಧ ಶಾಲಾ ಪ್ರತಿನಿಧಿ ರಾಜಶೇಖರ್ ಸಹಕರಿಸಿದರು.